ಬಾಣಂತಿಯರಿಗೆ ಮಡಿಲು ಕಿಟ್ ವಿತರಣೆ

ತುರುವೇಕೆರೆ, ಆ. ೮- ವಿಶ್ವ ಸ್ತನ್ಯಪಾನ ದಿನದ ಅಂಗವಾಗಿ ತುರುವೇಕೆರೆಯ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಸ್ತನ್ಯಪಾನದ ಅರಿವು ಮೂಡಿಸಿ ಮಡಿಲು ಕಿಟ್ ವಿತರಿಸಲಾಯಿತು.
ಇನ್ನರ್‌ವ್ಹೀಲ್ ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್ ಮಾತನಾಡಿ, ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ. ಸ್ತನ್ಯಪಾನ ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳು ತಾಯಿಯ ಎದೆ ಹಾಲಿನಲ್ಲಿದೆ. ಆದ್ದರಿಂದ ತಾಯಂದಿರು ನಿರ್ಲಕ್ಷ್ಯ ಮಾಡದೆ, ಮೂಢ ನಂಬಿಕೆಗಳಿಗೆ ಮಾರು ಹೋಗದೆ ಮಗು ಜನಿಸಿದ ಮೊದಲ ೬ ತಿಂಗಳವರೆಗೆ ಸ್ತನ್ಯಪಾನ ಮಾಡಿಸುವುದು ಅತ್ಯಗತ್ಯ ಎಂದರು.
ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞೆ ತೇಜಸ್ವಿನಿ ಮಾತನಾಡಿ, ಬಾಲ್ಯದಲ್ಲಿ ಬರುವ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಸಹಾಯ ಮಾಡುವ ಪ್ರತಿಕಾಯಕಗಳನ್ನು ಎದೆಹಾಲು ಹೊಂದಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಎದೆಹಾಲು ಕುಡಿಯುವ ಮಕ್ಕಳು ಆರೋಗ್ಯ ಸಮಸ್ಯೆಗೆ ಹಾಗೂ ವೈದ್ಯ ಲೋಕದ ವರದಿಯ ಪ್ರಕಾರ ಸ್ತನ್ಯಪಾನ ಮಾಡುವ ಮಹಿಳೆಯರು ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಹೇಳಲಾಗಿದೆ ಎಂದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಹರಿಪ್ರಸಾದ್ ಮಾತನಾಡಿ, ಸ್ತನ್ಯಪಾನದ ಪ್ರಯೋಜನಗಳು ಮತ್ತು ಮಗುವಿಗೆ ಹಾಲುಣಿಸಲು ತಾಯಂದಿರನ್ನು ಪ್ರೇರೇಪಿಸುವ ಸಲುವಾಗಿ ೧೯೯೧ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಕ್ಕೂಟವೊಂದನ್ನು ಸ್ಥಾಪಿಸಿ ೧೯೯೨ರಲ್ಲಿ ಮೊಟ್ಟ ಮೊದಲ ಬಾರಿಗೆ ಸುಮಾರು ೭೦ ದೇಶಗಳು ಪಾಲ್ಗೊಂಡು ಸ್ತನ್ಯಪಾನ ಸಪ್ತಾಹವನ್ನು ಆಚರಿಸಿ ಸ್ತನ್ಯಪಾನದ ಬಗ್ಗೆ ವಿಶ್ವದಾದ್ಯಂತ ಅರಿವು ಮೂಡಿಸುವ ಕೆಲಸವನ್ನು ಮಾಡಿದವು. ಪ್ರಸ್ತುತ ೧೦೦ಕ್ಕೂ ಅಧಿಕ ದೇಶಗಳು ಪ್ರತಿ ವರ್ಷದ ಆಗಸ್ಟ್ ತಿಂಗಳ ಮೊದಲ ವಾರ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಿ ಶಿಶುಗಳಿಗೆ ತಾಯಂದಿರು ಹಾಲುಣಿಸಲು ಉತ್ತೇಜಿಸಲಾಗುತ್ತಿದೆ ಎಂದರು.
ಇನ್ನರ್ ವೀಲ್‌ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಲತಾಪ್ರಸನ್ನ ಮಾತನಾಡಿ, ತಾಯಿಯ ಎದೆ ಹಾಲನ್ನು ಕೃತಕವಾಗಿ ಸೃಷ್ಟಿಸಲಾಗದು ಹಾಗೂ ಸ್ತನ್ಯಪಾನ ಮಾತೆಯ ಮಮತೆಯ ಪ್ರತೀಕ. ಮಗುವಿಗೆ ಹಾಲು ನೀಡುವುದರಿಂದ ಶಿಶು ಮರಣ ಪ್ರಮಾಣ ಕಡಿಮೆಯಾಗಲಿದೆ. ತಾಯಂದಿರು ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ನಿಮ್ಮ ಎದೆಹಾಲು ಕುಡಿದು ಬೆಳೆಯುವ ಮಗುವಿನ ಆರೋಗ್ಯಕ್ಕೂ ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಬಾಣಂತಿಯರಿಗೆ ಅಗತ್ಯವಿರುವ ಪರಿಕರಗಳನ್ನೊಳಗೊಂಡ ಮಡಿಲು ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯೆ ಡಾ.ಆಶಾ ಚೌದ್ರಿ, ಇನ್ನರ್ ವೀಲ್‌ಕ್ಲಬ್ ಕಾರ್ಯದರ್ಶಿ ಸವಿತ ಅನಿಲ್, ಪದಾಧಿಕಾರಿಗಳಾದ ರೇಖಾ, ರಶ್ಮಿ ರವಿಶಂಕರ್, ನೇತ್ರಾ, ಸ್ವಪ್ನ ನಟೇಶ್, ಆಶಾ ರಾಜಶೇಖರ್, ಶಿವಗಂಗಾ, ಕವಿತಾ, ರೂಪರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.