ಬಾಣಂತಿಯರಿಗೆ ಆರೈಕೆ – ಮನೆಮದ್ದು

೧. ಬಾಣಂತಿಯರಿಗೆ ಹುರುಳಿಸಾರು ಕೊಡುವುದರಿಂದ ಗರ್ಭಾಶಯದ ನೋವು ಕಡಿಮೆ ಆಗಿ ಸೋಂಕು ಬರದಂತೆ ಕಾಪಾಡುತ್ತದೆ. ಉತ್ತಮ ಪೌಷ್ಠಿಕಾಂಶವೂ ಮಗುವಿಗೆ ದೊರೆತಂತೆ ಆಗುತ್ತದೆ.
೨, ಎಲ್ಲಾ ಬಗೆಯ ಸಬ್ಬಸ್ಸಿಗೆ, ಪಾಲಕ್, ಹೊನೆಗೊನೆ, ಬಸಳೆ, ಅಗಸೆ, ಕೊತ್ತಂಬರಿ, ಕರಿಬೇವು ಸೊಪ್ಪು, ಬೆಳ್ಳುಳ್ಳಿ, ಕ್ಯಾರೆಟ್, ಸೋರೆಕಾಯಿ, ಬೀಟ್‌ರೋಟ್, ಸುವರ್ಣಗೆಡ್ಡೆ, ನುಗ್ಗೆಕಾಯಿ ಈ ರೀತಿ ತರಕಾರಿ ಹಾಗೂ ಸೇಬುಹಣ್ಣು, ಪಪ್ಪಾಯಿ, ಸಪೋಟ, ಮಾವಿನಹಣ್ಣು ಇತ್ಯಾದಿ ಹಣ್ಣುಗಳನ್ನು ಬಾಣಂತಿಯರು ಸೇವಿಸಬಹುದು.
೩. ಅಂಟಿನ ಉಂಡೆಯನ್ನು ಕೊಡುವುದು ಹಿಂದಿನಿಂದ ಬಂದ ಪದ್ಧತಿ. ಇದು ಈ ಸಮಯದಲ್ಲಿ ಅತ್ಯಂತ ಶ್ರೇಷ್ಠವಾದದ್ದು, ಇದು ಪೌಷ್ಠಿಕಕರವಾದದ್ದು, ರುಚಿಕರವಾದದ್ದು. ಇದಕ್ಕೆ ಬೇಕಾಗುವ ಪದಾರ್ಥಗಳೆಂದರೆ, ಒಣಕೊಬ್ಬರಿತುರಿ, ಖರ್ಜೂರ, ಗಸಗಸೆ, ಲವಂಗ, ಬಿಳಿಗೋಂದು, ಬೆಲ್ಲ ಕರಗಿಸಿ ಅದರಲ್ಲಿ ಹಾಕಿ ಚೆನ್ನಾಗಿ ಕಲಸಿ ಉಂಡೆಗಳನ್ನಾಗಿ ಮಾಡಿಟ್ಟುಕೊಂಡು ಬಾಣಂತಿಯರಿಗೆ ಕೊಡಬೇಕು.
೪. ಪ್ರಸವಾ ನಂತರದಲ್ಲಿ ಹುರುಳಿಯನ್ನು ಚೆನ್ನಾಗಿ ಬೇಯಿಸಿ ಕೇವಲ ಆ ಕಟ್ಟಿಗೆ ಚಿಟಿಕೆ ಉಪ್ಪು, ಚಿಟಿಕೆ ಕಾಳು ಮೆಣಸಿನಪುಡಿ ಸೇರಿಸಿ, ಕುಡಿಯಲಿಕ್ಕೆ ಕೊಟ್ಟರೆ ಅಂತರ್ಮಲವು ಸಂಪೂರ್ಣವಾಗಿ ಹೊರಕ್ಕೆ ಬಂದು ಗರ್ಭಾಶಯದ ನೋವು ಕಡಿಮೆಯಾಗುತ್ತದೆ.
೫. ಶುಂಠಿಯ ಪುಡಿಯನ್ನು ಬೆಲ್ಲ ಮತ್ತು ತುಪ್ಪದಲ್ಲಿ ಕಲಸಿ ಉಂಡೆಗಳಾಗಿ ಮಾಡಿಟ್ಟುಕೊಂಡು ದಿನಬಿಟ್ಟುದಿನ ಬೆಳಿಗ್ಗೆ ತಿಂಡಿಗೆ ಮುಂಚೆ ಸೇವಿಸುತ್ತಾ ಬಂದರೆ ಶರೀರದಲ್ಲಿ ವಾಯು ಶೇಖರಣೆಯಾಗಲ್ಲ ಹಾಗೂ ನೀರಿನ ಅಂಶ ಇಂಗಲು ಸಹಾಯವಾಗುತ್ತದೆ.
೬. ಬಾಣಂತಿಯರಿಗೆ ರಕ್ತಸ್ರಾವ ಅಧಿಕವಾದರೆ ರಸಬಾಳೆ ಗಿಡದ ಗೆಡ್ಡೆಯನ್ನು ತಂದು ೧ ಚಮಚ ಜೀರಿಗೆ, ೧ ಚಮಚ ಕೊತ್ತಂಬರಿ ಬೀಜ, ೪ – ೫ ಲವಂಗ ಎಲ್ಲವನ್ನೂ ಸೇರಿಸಿ ನೀರಿನಲ್ಲಿ ಹಾಕಿ ಕುದಿಸಿ, ಶೋಧಿಸಿ, ಸ್ವಲ್ಪಸ್ವಲ್ಪ ಸೇವಿಸುತ್ತಾ ಇರಬೇಕು.
೭. ಬಾಣಂತಿಯರ ಜ್ವರಕ್ಕೆ: ಮಗುವಿಗೆ ಹಾಲು ಕುಡಿಸುವುದರಿಂದ, ಬೇರೆ ಔಷಧಿ ಸೇವನೆ ಬದಲಿಗೆ ಆಡಿನ ಹಾಲಿಗೆ ಶುಂಠಿ ಪುಡಿಯನ್ನು ಹಾಕಿ ಕುದಿಸಿ ಶೋಧಿಸಿಕೊಂಡು ಸಕ್ಕರೆ ಹಾಕಿ ಕುಡಿಯುವುದರಿಂದ ಬಾಣಂತಿಯರ ಜ್ವರ ಗುಣವಾಗುತ್ತದೆ.
೮. ಎದೆಹಾಲು ಹೆಚ್ಚಲು: ಪ್ರಸವಾನಂತರ ೪ – ೫ ಲವಂಗದ ತುಣುಕುಗಳನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ೨ ಚಮಚದಷ್ಟು ಕಷಾಯಕ್ಕೆ ೧ ಚಿಟಿಕೆ ಇಂಗನ್ನು ಹಾಕಿ ಕುಡಿಯುತ್ತಾ ಬರಬೇಕು. ಇದರಿಂದ ಎದೆಹಾಲು ಉತ್ಪತ್ತಿ ಜಾಸ್ತಿ ಆಗುತ್ತದೆ.
೯. ಎಳೆಯದಾದ ಮುಸುಕಿನ ಜೋಳದ ಕಾಳುಗಳನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಇದನ್ನು ಪ್ರತಿನಿತ್ಯ ೧ ಚಮಚ ಪುಡಿಗೆ ಸ್ವಲ್ಪ ಕಲ್ಲುಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸಿದರೆ ಹಾಲು ಉತ್ಪತ್ತಿ ಜಾಸ್ತಿಯಾಗುತ್ತದೆ.
೧೦. ಹೊನೆಗೊನೆ ಸೊಪ್ಪಿನ ಪಲ್ಯ ಅಥವಾ ಸಬ್ಬಸ್ಸಿಗೆ ಸೊಪ್ಪಿನ ಪಲ್ಯ ಸೇವನೆಯೂ ಸಹ ಉತ್ತಮ ಸಹಕಾರಿ.
೧೧. ಅಲಸಂದಿಕಾಯಿಯ ಪಲ್ಯವನ್ನು ಮಾಡಿ ಸೇವಿಸಿ (ಯಾವುದೇ ವಿಧವಾದ ಪಲ್ಯ ಮಾಡಿದರೂ ತುಪ್ಪದಲ್ಲಿ ಒಗ್ಗರಣೆ ಹಾಕಬೇಕು, ಎಣ್ಣೆ ಬಳಸಬಾರದು).
೧೨. ಶುದ್ಧ ಅರಿಶಿನವನ್ನು ಮೈಗೆ ಹಚ್ಚಲು ಹಾಗೂ ಆಹಾರದ ಜೊತೆ ಹೆಚ್ಚಾಗಿ ಸೇವಿಸುವುದರಿಂದ ಯಾವುದೇ ರೀತಿಯ ಇನ್‌ಫೆಕ್ಷನ್ ಆಗಲ್ಲ ಹಾಗೂ ಮೈಯಲ್ಲಿನ ನೀರು ಇಂಗಲು ಸಹಾಯವಾಗುತ್ತದೆ.
೧೩. ಕ್ಯಾಲ್ಸಿಯಂ ಕೊರತೆ ಶರೀರದಲ್ಲಿ ಜಾಸ್ತಿಯಾಗುವುದರಿಂದ ಹಾಲು ಹಾಗೂ ಹಸುವಿನ ತುಪ್ಪವನ್ನು ಹೆಚ್ಚಾಗಿ ಬಳಸಬೇಕು. ಮಗುವಿನ ಬೆಳವಣಿಗೆಗೆ ಸುಣ್ಣದ ಅವಶ್ಯಕತೆ ಜಾಸ್ತಿ ಇರುತ್ತದೆ.
೧೪. ವೀಳ್ಯದೆಲೆ, ಅಡಿಕೆ, ಸುಣ್ಣ ಸೇರಿಸಿ ಹಾಕುವುದರಿಂದ ಮಗುವು ಹಾಲನ್ನು ಕಕ್ಕುವುದಿಲ್ಲ. ತಿಂದ ಆಹಾರ ಚೆನ್ನಾಗಿ ಜೀರ್ಣಿಸುತ್ತದೆ.
೧೫. ಒಂದು ತಿಂಗಳ ನಂತರ ಬಾಣಂತಿಯರು ಸ್ವಲ್ಪ ವ್ಯಾಯಾಮವನ್ನು ಮಾಡಬೇಕು.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧