ಬಾಡಿಗೆ ಮನೆಯವರಿಗೂ ಉಚಿತ ವಿದ್ಯುತ್

ಮಾಜಿ ಮುಖ್ಯಮಂತ್ರಿ ದಿ|| ಡಿ.ದೇವರಾಜ ಅರಸುರವರ ೪೧ನೇ ಪುಣ್ಯಸ್ಮರಣೆ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿಧಾನಸೌಧದ ಮುಂಭಾಗ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಚಿವ ಶಿವರಾಜ್ ತಂಗಡಗಿ ಮತ್ತಿತರರು ಇದ್ದಾರೆ.

ಬೆಂಗಳೂರು,ಜೂ.೬:ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆಯ ಲಾಭ ಬಾಡಿಗೆ ಮನೆಯವರಿಗೂ ಸಿಗಲಿದೆ. ಗೃಹಜ್ಯೋತಿ ಯೋಜನೆಯಡಿ ೨೦೦ ಯೂನಿಟ್ ಉಚಿತ ವಿದ್ಯುತ್ ಬಾಡಿಗೆ ಮನೆಯವರಿಗೂ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸುವ ಮೂಲಕ ಉಚಿತ ವಿದ್ಯುತ್ ಭಾಗ್ಯ ಬಾಡಿಗೆ ಮನೆಯವರಿಗೆ ಸಿಗುತ್ತದೋ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಎಳೆದಿದ್ದಾರೆ.ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರ ೪೧ನೇ ಪುಣ್ಯಸ್ಮರಣೆಯ ದಿನವಾದ ಇಂದು ವಿಧಾನಸೌಧದ ಮುಂಭಾಗದಲ್ಲಿರುವ ಅರಸುರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ೨೦೦ ಯೂನಿಟ್ ಉಚಿತ ವಿದ್ಯುತ್‌ನ ಗೃಹಜ್ಯೋತಿ ಯೋಜನೆ ಎಲ್ಲರಿಗೂ ಸಿಗುತ್ತದೆ. ಯಾರ್‍ಯಾರು ೨೦೦ ಯೂನಿಟ್ ಒಳಗೆ ವಿದ್ಯುತ್ ಬಳಸುತ್ತಾರೋ ಅವರಿಗೆಲ್ಲ ಉಚಿತ ವಿದ್ಯುತ್‌ನ ಲಾಭ ಸಿಗಲಿದೆ. ಬಾಡಿಗೆದಾರರಿಗೂ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ, ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.ವಾಣಿಜ್ಯ ಬಳಕೆಗೆ ಉಚಿತ ವಿದ್ಯುತ್ ಯೋಜನೆ ಅನ್ವಯಿಸುವುದಿಲ್ಲ. ಒಂದು ವೇಳೆ ವಾಣಿಜ್ಯ ಚಟುವಟಿಕೆಗಳಿಗೆ ವಿದ್ಯುತ್ ಬಳಸುತ್ತಿದ್ದರೆ ಅಂತಹವರಿಗೆ ಉಚಿತ ವಿದ್ಯುತ್ ನೀಡಲ್ಲ, ಬಾಡಿಗೆದಾರರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಖಚಿತಪಡಿಸಿದರು.
ಬಾಡಿಗೆದಾರರಿಗೂ ಉಚಿತ ವಿದ್ಯುತ್ ಸಚಿವ ಜಾರ್ಜ್
ಗೃಹಜ್ಯೋತಿ ಯೋಜನೆಯ ಮಾರ್ಗಸೂಚಿಯಲ್ಲಿ ಒಂದೇ ಆರ್‌ಆರ್ ನಂಬರ್‌ಗೆ ಮಾತ್ರ ಉಚಿತ ವಿದ್ಯುತ್ ಸಿಗಲಿದೆ ಎಂದು ಹೇಳಿರುವ ಬಗ್ಗೆ ಸಷ್ಟನೆ ನೀಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರವವರೂ ಕೂಡ ಗೃಹಜ್ಯೋತಿಗೆ ಅರ್ಹರಾಗಿದ್ದಾರೆ. ೨೦೦ ಯೂನಿಟ್ ಉಚಿತ ವಿದ್ಯುತ್‌ನ್ನು ಬಾಡಿಗೆದಾರರಿಗೂ ನೀಡುತ್ತೇವೆ ಎಂದು ಹೇಳಿದ್ದಾರೆ.
ಬಾಡಿಗೆದಾರರು ಅರ್ಜಿ ಸಲ್ಲಿಸುವಾಗ ಸಂಪೂರ್ಣ ದಾಖಲೆಗಳನ್ನು ಒದಗಿಸಬೇಕು, ಹಾಗೆಯೇ ಮನೆ ಮಾಲೀಕರು ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸಿರಬೇಕು. ಎಷ್ಟು ಬಾಡಿಗೆ ಮನೆ ಹೋದಿದ್ದೇವೆ ಎಂಬ ಮಾಹಿತಿಯನ್ನೂ ನೀಡಬೇಕು. ಎಷ್ಟು ವರ್ಷದಿಂದ ಬಾಡಿಗೆ ಕೊಡುತ್ತಿದ್ದೇವೆ ಎಂಬ ಬಗ್ಗೆಯೂ ವಿವರ ನೀಡಬೇಕು. ತಪ್ಪು ಮಾಹಿತಿ ನೀಡಿದರೆ ಈ ಯೋಜನೆಯ ಲಾಭ ಸಿಗಲ್ಲ ಎಂದರು.