ಬಾಡಿಗೆ ಕಡಿತಕ್ಕೆ ಮನವಿ

ಬ್ಯಾಡಗಿ, ಜೂ 4: ಕಳೆದ 15 ತಿಂಗಳುಗಳಿಂದ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸರ್ಕಾರದ ಲಾಕ್’ಡೌನ್ ಆದೇಶದಿಂದ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಪಟ್ಟಣದ ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆದಾರರ ಆರು ತಿಂಗಳ ಬಾಡಿಗೆಯನ್ನು ಕಡಿತಗೊಳಿಸಬೇಕೆಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿರುವ ಅವರು ಕಳೆದೊಂದು ವರ್ಷದಿಂದ ಕೊರೊನಾ ಸೋಂಕು ಉಲ್ಬಣಗೊಂಡು ಜನರ ಆರ್ಥಿಕ ವ್ಯವಸ್ಥೆಯಂತೂ ಬಹಳಷ್ಟು ಕುಸಿದಿದ್ದು, ವ್ಯಾಪಾರ ವಹಿವಾಟು ಇಲ್ಲದೇ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ ಪುರಸಭೆಯಿಂದ ಬಾಡಿಗೆ ನೀಡಿರುವ ವಾಣಿಜ್ಯ ಮಳಿಗೆಗಳ ಒಂದು ವರ್ಷದ ಬಾಡಿಗೆಯಲ್ಲಿ ಆರು ತಿಂಗಳ ಬಾಡಿಗೆಯನ್ನು ಸಂಪೂರ್ಣ ಕಡಿಮೆ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಿಗೆ ಕೋರಿದ್ದು, ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿ ಕೂಡಲೇ ಬಾಡಿಗೆ ಹಣವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.