ಬಾಡಿಗೆ ಆಧಾರಿತ ಕೃಷಿ ಯಂತ್ರಧಾರೆಗೆ‌ ಕೂಡ್ಲಿಗಿ ಶಾಸಕ ಎನ್ ವೈ ಜಿ ಚಾಲನೆ.

ಕೂಡ್ಲಿಗಿ.ಜೂ.7:- ಗ್ರಾಮೀಣ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಕೃಷಿ ಯಂತ್ರಧಾರೆ ಯೋಜನೆಯು ಸಹಕಾರಿಯಾಗಲಿದೆ. ಈ ಯೋಜನೆಯ ಸದುಪಯೋಗವನ್ನು ಕೃಷಿಕರು ಪಡೆಯಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.
ಅವರು ತಾಲೂಕಿನ ಕಾನಾಹೊಸಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ- 50 ರ ಪಕ್ಕದಲ್ಲಿರುವ ರೈತ ಸಂಪರ್ಕ ಕೇಂದ್ರದ ಬಳಿ ಬಾಡಿಗೆ ಆಧಾರಿತ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಕೃಷಿ ಚಟುವಟಿಕೆಗೆ ಬೇಕಾದ ಯಂತ್ರಗಳು ಸೇರಿ ಇತರೆ ಪರಿಕರಗಳನ್ನು ಕೃಷಿ ಇಲಾಖೆ ನಿಗದಿಪಡಿಸಿದ ಬಾಡಿಗೆ ದರದಲ್ಲಿ ರೈತರು ಪಡೆಯಬೇಕಾಗಿದೆ ಎಂದರು.
ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸ್ತುತ ಇರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿನ ಕುರಿತು ಶಾಸಕ ಗೋಪಾಲಕೃಷ್ಣ ಅವರು ಕೇಳಿದ್ದಕ್ಕೆ, ಕೂಡ್ಲಿಗಿ ತಾಲೂಕಿನ ಹಿರಿಯ ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ ಮಾತನಾಡಿ, ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಇದೆ. ಆದರೆ, ಕೂಡ್ಲಿಗಿ ಪಟ್ಟಣದಲ್ಲಿ ಮಾತ್ರ ಡಿಎಪಿ ಗೊಬ್ಬರದ ಕೊರತೆ ಇದೆ. ಅದನ್ನು ಸಹ ರೈತರಿಗೆ ತೊಂದರೆಯಾಗದಂತೆ ಪೂರೈಸಲು ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ ಸೇರಿ ಇತರೆ ಬಿತ್ತನೆ ಬೀಜಗಳನ್ನು ರೈತರಿಗೆ ಸಹಾಯಧನದಲ್ಲಿ ವಿತರಿಸಲಾಯಿತು. ಅಲ್ಲದೆ, ಮೇವಿನ ಬಣವೆಗಳು ಸುಟ್ಟು ನಷ್ಟ ಅನುಭವಿಸಿರುವ
ರೈತರಾದ ಗುಂಡುಮುಣುಗು ಮುಕ್ಕಣ್ಣ, ಮಾಕನಡುಕು ನಾಗೇಂದ್ರಪ್ಪ, ಹಾರಕಬಾವಿ ಬಸಮ್ಮ ಅವರಿಗೆ ಪರಿಹಾರದ ಚೆಕ್ ನ್ನು ಶಾಸಕ ಎನ್.ವೈ.ಗೋಪಾಲಕೃಷ್ಣ ವಿತರಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ನಾಗರತ್ನಮ್ಮ ಕೆ.ಲಿಂಗಪ್ಪ, ಗ್ರಾಪಂ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಜಿಪಂ ಸದಸ್ಯ ಹುರುಳಿಹಾಳ್ ಎಚ್.ರೇವಣ್ಣ, ತಾಪಂ‌ ಸದಸ್ಯ ಹುಡೇಂ ಪಾಪನಾಯಕ, ಬಿಜೆಪಿ ಕೂಡ್ಲಿಗಿ ಮಂಡಲ ಅಧ್ಯಕ್ಷ ಕೆ.ಚನ್ನಪ್ಪ, ಗ್ರಾಪಂ ಸದಸ್ಯರಾದ ಎಂ.ಹೊನ್ನೂರಸ್ವಾಮಿ, ಜೋಗಿಹಳ್ಳಿ ಸಿದ್ದಪ್ಪ, ಕೃಷಿ ಇಲಾಖೆ ಆತ್ಮ ಯೋಜನೆಯ ಅಧಿಕಾರಿ ಶ್ರವಣಕುಮಾರ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ.ಚೈತ್ರಾ, ಸಹಾಯಕ ಕೃಷಿ ಅಧಿಕಾರಿ ಹುಡೇಂ ಕೆ.ಎಂ.ಮಾನಸ, ಆತ್ಮ ಯೋಜನೆಯ ಎಟಿಎಂ ರಾಮಕೃಷ್ಣ, ಆರ್ ಎಸ್ ಕೆ ಸಿಬ್ಬಂದಿ ರಾಕೇಶ್ ರೆಡ್ಡಿ, ಕೆ. ರಾಜಪ್ಪ, ಜಿ.ನಾಗರಾಜ,
ಕಾನಹೊಸಹಳ್ಳಿ ನಾಡಕಚೇರಿಯ ಉಪ ತಹಸೀಲ್ದಾರ್ ಚಂದ್ರಮೋಹನ್, ಕಂದಾಯ ನಿರೀಕ್ಷಕ ಮುರಳಿ ಕೃಷ್ಣ, ಗ್ರಾಮಲೆಕ್ಕಾಧಿಕಾರಿ ಶ್ರೀನಿವಾಸ ಕೊಂಡಿ ಹಾಗೂ ಇತರರಿದ್ದರು.


ಕಾನಹೊಸಹಳ್ಳಿಯಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರಧಾರೆ ನಡೆಸಲು ಚಿತ್ರದುರ್ಗದ ವರ್ಷಾ ಏಜೆನ್ಸಿಗೆ ಐದು ವರ್ಷಗಳಿಗೆ ಟೆಂಡರ್ ಆಗಿದೆ. ಕೃಷಿಯಂತ್ರಗಳು ಸೇರಿ ಇತರೆ ಪರಿಕರಗಳನ್ನು ರೈತರಿಗೆ ಬಾಡಿಗೆ ನೀಡುವುದಕ್ಕೆ 75 ಲಕ್ಷ ರೂ.ಗಳ ಯೋಜನೆ ಇದಾಗಿದೆ. ಆ ಪೈಕಿ ಸರ್ಕಾರ ಶೇ.70ರಷ್ಟು ಅಂದರೆ 52.5 ಲಕ್ಷ ರೂ.ಅನುದಾನ ನೀಡಲಿದೆ. ಉಳಿದ ಶೇ. 30 ರಷ್ಟು ಅಂದರೆ 22.5 ಲಕ್ಷ ರೂ.ಅನುದಾನ ಏಜೆನ್ಸಿಯವರೇ ಭರಿಸುವರು ಎಂದು ಹಿರಿಯ ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ ತಿಳಿಸಿದರು. ಅಲ್ಲದೆ, ರೈತರು ಕೃಷಿ ಯಂತ್ರಗಳನ್ನು ಬಾಡಿಗೆ ಪಡೆಯುವುದರಿಂದ ಸೇರುವ ಹಣದಲ್ಲಿ ಕೃಷಿ ಯಂತ್ರಧಾರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ಸೇರಿ ನಿರ್ವಹಣೆಗೆ ಏಜೆನ್ಸಿಯವರು ಬಳಸಲಿದ್ದಾರೆ ಎಂದು ವಾಮದೇವ ಕೊಳ್ಳಿ ಮಾಹಿತಿ ನೀಡಿದರು.