ಬಾಗೇವಾಡಿ ತಾಲೂಕಿನ ವಿವಿಧ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ : ಪರಿಶೀಲನೆ

(ಸಂಜೆವಾಣಿ ವಾರ್ತೆ)
ವಿಜಯಪುರ: ಆ.17:ಬಸವನಬಾಗೇವಾಡಿ ತಾಲೂಕಿನ ಮಿನಿವಿಧಾನಸೌಧ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕಾ ಆಸ್ಪತ್ರೆ, ಪುರಸಭೆ ರೈತ ಸಂಪರ್ಕ ಕೇಂದ್ರ, ಬಸವನಬಾಗೇವಾಡಿ ನಗರದ ಮೆಘಾ ಮಾರುಕಟ್ಟೆಗೆ ಬುಧವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಸವನಬಾಗೇವಾಡಿ ತಾಲೂಕಿನ ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಕೆಸ್ವಾನ್ ಹಾಲ್‍ನಲ್ಲಿ ವಿಡಿಯೋ ಸಂವಾದ ನಡೆಸಿ, ಜಿಲ್ಲೆಯ ತಾಲೂಕಾ ತಹಶೀಲ್ದಾರ ಸಿಡಿಪಿಓ, ಬಿಇಒ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಮತದಾರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಗ್ರಾಮಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸುವಂತೆ ಬಿಎಲ್‍ಓಗಳಿಗೆ ಸೂಚಿಸಿದ ಅವರು, ಮತದಾರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನಮೂನೆಗಳ ಪ್ರಕ್ರಿಯೆಯನ್ನು ನಿಯಮಾನುಸಾರ ಕೈಗೊಂಡು, ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಂತರ ಬಸವನಬಾಗೇವಾಡಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು, ತಾಲೂಕಿನ ವಸತಿ ನಿಲಯಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಯಾವುದೇ ಮೂಲಸೌಲಭ್ಯದ ಕೊರತೆಯಾಗದಂತೆ ಹಾಗೂ ಯಾವುದೇ ದೂರು ಬಾರದಂತೆ ನೋಡಿಕೊಳ್ಳಬೇಕು. ನಿಯಮಿತವಾಗಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುವಂತೆ ಸೂಚನೆ ನೀಡಿದರು.
ತಾಲೂಕಾ ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡಿ, ಸರ್ಕಾರದ ಮಹತ್ವಾಕಾಂಕ್ಷೆ ಅನ್ನಭಾಗ್ಯ ಯೋಜನೆಯ ಲಾಭ ಎಲ್ಲ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅರ್ಹ ಫಲಾನುಭವಿಗಳ ಆಧಾರ ಜೋಡಣೆ ಇರುವ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಕ್ರಮ ವಹಿಸಿ ಅನ್ನ ಭಾಗ್ಯ ಯೋಜನೆ ಲಾಭ ದೊರಕಿಸಲು ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿ ಕ್ರಮ ವಹಿಸಿ, ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಅವರು ಸೂಚಿಸಿದರು.
ನಗರ ಭೂಮಾಪನಾ ಇಲಾಖೆ ಕಚೇರಿಗೆ ಭೇಟಿ ನೀಡಿ, ವಿವಿಧ ಕಡತಗಳನ್ನು ಪರಿಶೀಲನೆ ಅಧಿಕಾರಿ-ಸಿಬ್ಬಂದಿ ಹಾಜರಾತಿ, ಕಾರ್ಯವೈಖರಿ ಕುರಿತು ಪರಿಶೀಲಿಸಿದ ಅವರು, ಇಲಾಖೆಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಅಭಿಲೇಖಾಲಯದಲ್ಲಿರುವ ವಹಿಗಳನ್ನು ಸುರಕ್ಷಿತವಾಗಿಡಬೇಕು. ಆಸ್ತಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಯಮಾನುಸಾರ ತ್ವರಿತ ವಿಲೇವಾರಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಾ ಉಪ ನೊಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಸ್ತಿರಾಸ್ಥಿ ಮಾರ್ಗಸೂಚಿಯನ್ವಯ ಆಸ್ತಿ ನೊಂದಣಿ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಯಾವುದೇ ಲೋಪಗಳಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದು, ಯಾವುದೇ ಲೋಪಕ್ಕೆ ಆಸ್ಪದ ನೀಡದೇ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ತಾಲೂಕಿನ ರೇಷ್ಮೆ ಇಲಾಖೆ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ, ಜಿಲ್ಲೆ ರೇಷ್ಮೆ ಉತ್ಪಾದನೆಯಲ್ಲಿ ಉತ್ತಮ ಸಾಧನೆಗೈಯುತ್ತಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿ, ಬಸವನಬಾಗಬೇವಾಡಿ ತಾಲೂಕಿನಲ್ಲಿ 685 ಎಕರೆ ರೇಷ್ಮೆ ಉತ್ಪಾದಿಸಲಾಗುತ್ತಿದೆ, ಜಿಲ್ಲೆಯಲ್ಲಿ ಪ್ರತಿಶತ ಶೇ.55 ರಷ್ಟು ರೇಷ್ಮೆ ಬಸವನಬಾಗೇವಾಡಿಯೊಂದರಲ್ಲಿಯೇ ಉತ್ಪಾದನೆಯಾಗುತ್ತಿದೆ. ಎಆರ್‍ಎಂ (ಅಟೋಮ್ಯಾಟಿಕ್ ರಿಲಿಂಗ್ ಮಶೀನ್) ದಿಂದ ಪ್ರತಿ ನಿತ್ಯ 500 ಕೆ.ಜಿ. ರೇಷ್ಮೆ ನೂಲು ತೆಗೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಂತರ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ತೋಟಗಾರಿಕೆ ಬೆಳೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮಿನಿವಿಧಾನಸೌಧದಲ್ಲಿರುವ ತಾಲೂಕಾ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಕಾರ್ಯನಿರ್ವಹಣೆ ಕುರಿತು ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಜಿ.ಎಸ್.ನಾಯಕ್, ತಾಲೂಕಾ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿ ಅಣ್ಣಿಗೇರಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎನ್.ಹಿರೇಮಠ, ಅಬಕಾರಿ ಇಲಾಖೆ ಜೆ.ಎಸ್.ಪಾಟೀಲ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಶ್ರೀಮತಿ ಭವಾನಿ ಪಾಟೀಲ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಿ.ಬಿ.ಪಾಟೀಲ ಎಡಿಎಲ್‍ಆರ್ ಮುರುಗೇಶ ರೂಡಗಿ, ರೇಷ್ಮೆ ಇಲಾಖೆ ಅಧಿಕಾರಿ ಎಸ್.ಆಯ್.ಗೊಲಗೊಂಡ, ಬಿಇಓ ವಿಲಾಸ ರಾಠೋಡ, ಕಂದಾಯ ಇಲಾಖೆಯ ಬಸವರಾಜ ದಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.