ಬಾಗೇಪಲ್ಲಿಯಲ್ಲಿ 2.66 ಕೋಟಿ ಮೌಲ್ಯದ ಚಿನ್ನ ಜಪ್ತಿ

ಬೆಂಗಳೂರು, ಏ.೮- ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಹದ್ದಿನಕಣ್ಣಿಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ೨.೬೬ ಕೋಟಿ ಮೌಲ್ಯದ ೫.೫೮೫ ಕೆ.ಜಿ ಚಿನ್ನಾಭರಣಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ಆಂಧ್ರಪ್ರದೇಶದ ಕರ್ನೂಲಿನ ಚಿನ್ನಾಭರಣ ಮಾರಾಟ ಅಂಗಡಿಯಿಂದ ವಿಜಯವಾಡದ ಚಿನ್ನಾಭರಣ ಮಾರಾಟ ಅಂಗಡಿಗೆ ಕೊಂಡೊಯ್ಯಲಾಗುತ್ತಿತ್ತು ಎಂದು ಕಾರಿನಲ್ಲಿದ್ದವರು ತಿಳಿಸಿದ್ದಾರೆ.
ಆದರೆ, ಗಡಿ ಭಾಗದ ಬಾಗೇಪಲ್ಲಿ ಚೆಕ್ ಪೋಸ್ಟ್‌ಗೆ ಏಕೆ ಬಂದರು ಎಂದು ಅಧಿಕಾರಿಗಳು ಅನುಮಾನಿಸಿ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ.
ನಮ್ಮ ಗಡಿ ಭಾಗದ ಚೆಕ್‌ಪೋಸ್ಟ್‌ಗೆ ಬಂದಿದ್ದರಿಂದ ಚಿನ್ನ ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ. ಸದ್ಯಕ್ಕೆ ಚಿನ್ನವನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ’ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಬೆಳ್ಳಿ,ನಗದು ಜಪ್ತಿ:
ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ೩ ಲಕ್ಷ ಮೌಲ್ಯದ ೪.೯ ಕೆ.ಜಿ ತೂಕದ ಬೆಳ್ಳಿ ಬಿಸ್ಕತ್ ಹಾಗೂ ೫ ಲಕ್ಷ ನಗದನ್ನು ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.