ಬಾಗಿಲು ತೆರೆದ ಸರಸ್ವತಿ ಮಂದಿರಗಳು

ಬೆಂಗಳೂರು, ಜ. ೧- ಕೊರೊನಾ ಭೀತಿಯಿಂದ ಕಳೆದ ೯ ತಿಂಗಳಿನಿಂದ ಮುಚ್ಚಿದ್ದ ಶಾಲಾ- ಕಾಲೇಜುಗಳ ಬಾಗಿಲನ್ನು ಇಂದು ತೆರೆಯುತ್ತಿದ್ದಂತೆಯೇ ಹೊಸ ವರ್ಷದಲ್ಲಿ ಹೊಸ ಹುಮ್ಮಸಿನಿಂದ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕಿದರು.
ವಿದ್ಯಾರ್ಥಿಗಳ ಸುರಕ್ಷತೆಗೆ ಅದ್ಯತೆ ನೀಡಿ ಕೊರೊನಾ ‘ಓಡಿಸೋಣ, ವಿದ್ಯಾರ್ಥಿಗಳ ಓದಿಸೋಣ’ ಎಂಬ ಧ್ಯೇಯ ವ್ಯಾಕ್ಯದೊಂದಿಗೆ ಸರ್ಕಾರ ಶಾಲಾ- ಕಾಲೇಜುಗಳ ತರಗತಿಯನ್ನು ಇಂದಿನಿಂದ ಪ್ರಾರಂಭಿಸಿದೆ.
ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದರೂ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಇಂದು ತರಗತಿಗಳಿಗೆ ಹಾಜರಾಗಿರಲಿಲ್ಲ. ಕೆಲವು ಶಾಲಾ- ಕಾಲೇಜುಗಳಲ್ಲೂ ಶಿಕ್ಷಕರ ಗೈರು ಹಾಜರಿ ಕಂಡು ಬಂತು.
ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲೇ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲಾ- ಕಾಲೇಜುಗಳತ್ತ ಹೆಜ್ಜೆ ಹಾಕಿದ್ದು ಹೆಚ್ಚಾಗಿ ಕಂಡು ಬಂತು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಎಸ್. ಸುರೇಶ್ ಕುಮಾರ್‌ರವರು ನಗರದ ಕೆಲವು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಆಡಳಿತ ವರ್ಗ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಜೊತೆಗೆ ವಿದ್ಯಾರ್ಥಿಗಳೊಂದಿಗೆ ಬೆರೆತು ಕೊರೊನಾಕ್ಕೆ ಹೆದರದೆ ಸುರಕ್ಷತೆಯನ್ನು ಪಾಲಿಸಿ ತರಗತಿಗಳಿಗೆ ಹಾಜರಾಗುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಮುಖ ಘಟ್ಟವಾಗಿರುವ ಹತ್ತನೇ ತರಗತಿ ಮತ್ತು ಪಿ.ಯು. ತರಗತಿಗಳನ್ನು ಇಂದಿನಿಂದ ಪ್ರಾರಂಭಿಸಲಾಗಿದೆ. ಅಂತೆಯೇ ೬, ೭, ೮ ಮತ್ತು ೯ನೇ ತರಗತಿ ಮಕ್ಕಳಿಗೆ ಶಾಲಾ ಆವರಣದಲ್ಲಿಯೇ ವಿದ್ಯಾಗಮ ಕಾರ್ಯ ಆರಂಭವಾಗಿದೆ.
ಶಾಲೆಗಳಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ ಸಿಬ್ಬಂದಿ ನಗುಮುಖದಿಂದಲೇ ಸ್ವಾಗತಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಮಾಸ್ಕ್ ಧರಿಸಿದ್ದು ಕಂಡು ಬಂತು. ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡೇ ಪಾಠ ಪ್ರವಚನ ಆಲಿಸಿದರು. ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವೇನಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲೇ ಪಾಠ ಕೇಳಬಹುದಾಗಿದೆ.

ಶಾಲಾ – ಕಾಲೇಜಿನ ಕೊಠಡಿಯಲ್ಲಿ ಒಂದು ಬೆಂಚಿನಿಂದ ಮತ್ತೊಂದು ಬೆಂಚಿಗೆ ೨ ಅಡಿ ಅಂತರವಿರಬೇಕು. ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇರಬೇಕು ವಿದ್ಯಾರ್ಥಿಗಳು ಅವರ ಮನೆಯಿಂದಲೇ ನೀರು ತರುವುದು. ಒಂದು ಶಾಲಾ ಕೊಠಡಿಯಲ್ಲಿ ಕನಿಷ್ಠ ಹದಿನೈದರಿಂದ ಇಪ್ಪತ್ತು ವಿದ್ಯಾರ್ಥಿಗಳಷ್ಟೇ ಅವಕಾಶ ನೀಡುವುದು ಉಳಿದಂತೆ ದೊಡ್ಡ ಕೊಠಡಿ ಇದ್ದರೆ ಅದನ್ನು ಆಯಾ ಶಿಕ್ಷಣ ಸಂಸ್ಥೆ ನಿರ್ಧರಿಸಬೇಕು ಎನ್ನುವ ಮಾರ್ಗಸೂಚಿ ನೀಡಲಾಗಿದೆ
ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ರವರೆಗೆ ಮಾತ್ರ ತರಗತಿಗಳು ನಡೆಯಲಿದ್ದು, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಖಾಸಗಿ ಸಂಸ್ಥೆಗಳಲ್ಲಿ ವಿಶೇಷ ಮಾರ್ಗಸೂಚಿಗಳನ್ನು ನೀಡಿರುವ ಸರ್ಕಾರ ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ರಾಜ್ಯದಲ್ಲಿ ೧೬೮೫೦ ಶಾಲೆಗಳಲ್ಲಿ ಇಂದಿನಿಂದ ಎಸ್ ಎಸ್ ಎಲ್ ಸಿ ತರಗತಿಗಳು ಆರಂಭವಾಗಿದ್ದು ಇದರಲ್ಲಿ ೫೭೭೫ ಸರ್ಕಾರಿ ಶಾಲೆಗಳು ೧೧೦೭೫ ಖಾಸಗಿ ಶಾಲೆಗಳು ಇವೆ. ಶಾಲೆಗಳು ಆರಂಭ ವಾಗುತ್ತಿರುವ ಹಿನ್ನಲೆಯಲ್ಲಿ ೧೬೮೫೦ ಶಾಲೆಯ ಶಿಕ್ಷಕರಿಗೂ ಕೊರೊನಾವನ್ನು ಪರೀಕ್ಷೆ ನಡೆಸಲಾಗಿದೆ ಶಾಲೆಯಲ್ಲಿ ೫೦ ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಪೇಸ್ ಶೀಲ್ಡ್ ಧರಿಸುವುದು ಕಡ್ಡಾಯವಾಗಿದೆ.
೪೪೮೧ ಕಾಲೇಜುಗಳಲ್ಲಿ ಪಿಯು ತರಗತಿಗಳು ಇಂದಿನಿಂದ ಆರಂಭವಾಗಿದೆ.೧೨೩೧ ಸರ್ಕಾರಿ ೭೫೦ ಅನುದಾನ ಖಾಸಗಿ ಶಾಲೆಗಳು ೨೫೦೦ ಅನುದಾನರಹಿತ ಖಾಸಗಿ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಿವೆ. ೪೪೮೧ ಕಾಲೇಜುಗಳ ಪೈಕಿ ಅರ್ಧದಷ್ಟು ಕಾಲೇಜುಗಳು ಬೆಂಗಳೂರಿನಲ್ಲಿವೆ ಹೀಗಾಗಿ ಬಹುತೇಕ ಶಿಕ್ಷಕರು ಉಪನ್ಯಾಸಕರ ಪರೀಕ್ಷೆ ನಡೆಸಲಾಗಿದೆ.
ಕಾಲೇಜುಗಳಲ್ಲೂ ಕೂಡ ಕನಿಷ್ಠ ಒಂದು ರೂಮಿಗೆ ೧೫ರಿಂದ ೨೦ ವಿದ್ಯಾರ್ಥಿಗಳಿಗಷ್ಟೇ ಅವಕಾಶ ಮಾಡಿಕೊಡಲಾಗಿದೆ ಪ್ರತಿದಿನ ೪೫ ನಿಮಿಷಗಳ ೪ತರಗತಿ ಗಳಿಗೆ ಮಾತ್ರ ಮಾಡಿಕೊಳ್ಳಲಾಗಿದ್ದು ಎಲ್ಲ ಕಾಲೇಜುಗಳು ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ
ರಂಗೋಲಿ ಸ್ವಾಗತ:
ಸುಮಾರು ೯ ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿರುವುದರಿಂದ ರಂಗೋಲಿ ಹಾಕಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ಬಿಬಿಎಂಪಿ ಪಾಲಿಕೆ ಅಧೀನದಲ್ಲಿ ೧೫ ಪಿಯು ಕಾಲೇಜುಗಳಿದ್ದು, ೨೦೭೦ ವಿದ್ಯಾರ್ಥಿಗಳಿದ್ದಾರೆ. ೩೨ ಪ್ರೌಢಶಾಲೆಗಳಿದ್ದು, ೧೦ನೇ ತರಗತಿ ವಿದ್ಯಾರ್ಥಿಗಳು ೨,೧೯೦ ಇದ್ದಾರೆ. ಈಗಾಗಲೇ ವಿದ್ಯಾಗಮ ಯೋಜನೆ ಹಾಗೂ ಆನ್‌ಲೈನ್ ಮೂಲಕ ತರಗತಿ ನಡೆಸಲಾಗುತ್ತಿದೆ. ಆದರೆ, ಬಿಬಿಎಂಪಿ ಪಾಲಿಕೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಶಿಕ್ಷಣ ನೀಡಲು ಪಾಲಿಕೆ ಶಿಕ್ಷಣ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ.

  • ಮುನ್ನೆಚ್ಚರಿಕೆಯಿಂದ ಶಾಲಾ ಕಾಲೇಜು ಆರಂಭ
  • ಪ್ರತಿ ಕೊಠಡಿಗೆ ೧೫ರಿಂದ ೨೦ ವಿದ್ಯಾರ್ಥಿಗಳಿಗಷ್ಟೇ ಅವಕಾಶ
  • ಶಿಕ್ಷಕರು ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆ ನಡೆಸುವುದು ಅನಿವಾರ್ಯ
  • ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತರಗತಿಗಳು ಮಾತ್ರ ಆರಂಭ
  • ಎಸ್‌ಎಸ್‌ಎಲ್‌ಸಿ ತರಗತಿಗಳು ೧೦ರಿಂದ ೧೨.೩೦ ವರೆಗೆ ಮಾತ್ರ ನಡೆಸಲು ಅನುವು
  • ಕಾಲೇಜುಗಳಲ್ಲಿ ಪ್ರತಿದಿನ ೪೫ ನಿಮಿಷದ ನಾಲ್ಕು ತರಗತಿಗಳನ್ನು ನಡೆಸಲು ಮಾತ್ರ ಅವಕಾಶ.
  • ವಿದ್ಯಾರ್ಥಿಗಳು ಪೋಷಕರು ಭಯ ಪಡೆದಂತೆ ಸುರೇಶಕುಮಾರ್ ಅಭಯ.


ವಿದ್ಯಾರ್ಥಿಗಳ ಸುರಕ್ಷತೆ
ಸರ್ಕಾರದ ಆದ್ಯತೆ : ಸಿಎಂ

ಇಂದಿನಿಂದ ಪುನರಾರಂಭಗೊಂಡಿರುವ ೧೦ ಮತ್ತು ೧೨ನೇ ತರಗತಿಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ವಿದ್ಯಾಥಿಗಳು ಕಡ್ಡಾಯ ಮಾಸ್ಕ್ ಧರಿಸಿ ಭೌತಿಕ ಅಂತರ ಕಾಪಾಡಿಕೊಂಡು ಸ್ವಚ್ಚತೆ ಪಾಲಿಸಿ ಸರ್ಕಾರದೊಂದಿಗೆ ಸಹಕರಿಸುವಂತೆಯೂ ಅವರು ಟ್ವಿಟ್ಟರ್‌ನಲ್ಲಿ ಮನವಿ ಮಾಡಿದ್ದಾರೆ.
ಮಕ್ಕಳ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಇಂದಿನಿಂದ ೧೦ ಮತ್ತು ೧೨ನೇ ತರಗತಿಗಳು ಪುನರಾರಂಭವಾಗಿವೆ. ೬ ರಿಂದ ೯ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮವು ಪುನರಾರಂಭಗೊಳ್ಳಲಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಕೊರೊನಾ ಓಡಿಸೋಣ
ವಿದ್ಯಾರ್ಥಿಗಳ ಓದಿಸೋಣ

ಬನ್ನಿ ಕೊರೊನಾ ಓಡಿಸೋಣ, ವಿದ್ಯಾರ್ಥಿಗಳನ್ನು ಓದಿಸೋಣ ಎಂಬ ೨೦೨೧ರ ಹೊಸ ಧ್ಯೇಯ ವಾಕ್ಯದೊಂದಿಗೆ ಇಂದಿನಿಂದ ಶಾಲೆಗಳು ಪುನರಾರಂಭವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂಬ ನಿಯಮವಿಲ್ಲ. ಪೋಷಕರ ಅನುಮತಿ ಪತ್ರ ಪಡೆದು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕು. ಅಗತ್ಯ ಮುನ್ನೆಚ್ಚೆರಿಕೆ ಕ್ರಮವನು ಕೈಗೊಂಡು ಶಾಲೆಗಳನ್ನು ಸುರಕ್ಷತಾ ಕೇಂದ್ರಗಳಾಗಿ ಮಾರ್ಪಾಡು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಇಂದಿನಿಂದ ೧೦ ಮತ್ತು ೧೨ನೇ ತರಗತಿಗಳು ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಸುರಕ್ಷತಾ ಕ್ರಮಗಳು, ವಿದ್ಯಾರ್ಥಿಗಳ ಹಾಜರಿ ಎಲ್ಲವನ್ನು ಪರೀಕ್ಷಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಸುತ್ತೂರು ಶ್ರೀಗಳು, ಆದಿ ಚುಂಚನಗಿರಿ ಶ್ರೀಗಳು, ಸಿದ್ದಗಂಗಾ ಶ್ರೀಗಳೂ ಸೇರಿದಂತೆ ನಾಡಿನ ಹಲವು ಗಣ್ಯರು ಶಾಲಾ-ಕಾಲೇಜು ಪುನರಾರಂಭಕ್ಕೆ ಆರ್ಶೀವಾದ ಮಾಡಿದ್ದಾರೆ.
ಶಾಲೆಯ ಆರಂಭದ ದಿನ ವಿದ್ಯಾರ್ಥಿಗಳ ಹಾಜರಾತಿ ಪೂರ್ಣ ಪ್ರಮಾಣದಲ್ಲಿ ಇರದಿದ್ದರೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ವಿಶ್ವಾಸವಿದೆ ಎಂದವರು ಹೇಳಿದರು.
ಶಾಲೆಗಳಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಆತಂಕಪಡುವ ಅವಶ್ಯಕತೆಯಿಲ್ಲ ಎಂದವರು ಹೇಳಿದರು.