ಬಾಕ್ಸ್ ಅಫೀಸ್‌ನಲ್ಲಿ ಕೇರಳ ಸ್ಟೋರಿ ಸದ್ದು

ಲಕ್ನೋ,ಮೇ.೯- ವಿವಾದಗಳ ನಡುವೆ ತೆರೆಗೆ ಬಂದಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ. ಇದರ ನಡುವೆ ಉತ್ತರ ಪ್ರದೇಶ ಮತ್ತು ಮದ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಿಸಿವೆ.
ವಿವಾದ, ಪ್ರತಿಭಟನೆ, ಆಕ್ರೋಶಗಳ ನಡುವೆ ದೇಶದಾದ್ಯಂತ ಬಿಡುಗಡೆಯಾಗಿದೆ. ಕೆಲವು ರಾಜ್ಯಗಳು ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದರೂ ಸಹ ಹಲವೆಡೆ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಇದೀಗ ಉತ್ತರ ಪ್ರದೇಶ ಸರ್ಕಾರ ‘ದಿ ಕೇರಳ ಸ್ಟೋರಿ’ ಚಿತ್ರ ರಾಜ್ಯದಲ್ಲಿ ತೆರಿಗೆ ಮುಕ್ತ ಮಾಡಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಸಂಪುಟ ಸಹೋದ್ಯೋಗಿ ಗಳೊಂದಿಗೆ ಲೋಕಭವನದಲ್ಲಿ ಆಯೋಜಿಸಲಾಗಿರುವ ವಿಶೇಷ ಪ್ರದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರ ವೀಕ್ಷಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕೃತ ಖಾತೆ ಟ್ವೀಟ್‌ನಲ್ಲಿ ತಿಳಿಸಿದೆ.
ಮಧ್ಯಪ್ರದೇಶವು ಈಗಾಗಲೇ ಮೇ ೬ ರಿಂದ ರಾಜ್ಯದಲ್ಲಿ ‘ದಿ ಕೇರಳ ಸ್ಟೋರಿ’ಯನ್ನು ತೆರಿಗೆ ಮುಕ್ತಗೊಳಿಸಿದೆ.
‘ದಿ ಕೇರಳ ಸ್ಟೋರಿ’ ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆ ಪಿತೂರಿ ಬಹಿರಂಗಪಡಿಸುತ್ತದೆ ಎಂದು ಹೇಳಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಚಿತ್ರ ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರದಲ್ಲಿ ಹೆಣ್ಣು ಮಕ್ಕಳು ಕ್ಷಣಿಕ ಭಾವುಕತೆಗೆ ಸಿಲುಕಿ ಹೇಗೆ ಲವ್ ಜಿಹಾದ್‌ನ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ, ಅವರನ್ನು ಯಾವ ರೀತಿ ನಾಶ ಮಾಡಲು ಪ್ರಯತ್ನಿಸುತ್ತಾರೆ ಎಂಬುದನ್ನು ಚಿತ್ರ ಹೇಳುತ್ತದೆ”ಎಂದು ಮುಖ್ಯಮಂತ್ರಿ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಹೇಳಿದ್ದಾರೆ.

ನಿಷೇಧ:
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನ ಕಾಣದಂತೆ ನಿಷೇಧ ಹೇರಲಾಗಿದೆ. “ಬಂಗಾಳದಲ್ಲಿ ಶಾಂತಿ ಕಾಪಾಡಲು ಮತ್ತು ದ್ವೇಷದ ಕಿಚ್ಚು ಹರಡದಂತೆ ಹಾಗೂ ಹಿಂಸಾಚಾರದ ಯಾವುದೇ ಘಟನೆ ನಡೆಯದಂತೆ ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ
ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಮೇ ೭ ರಿಂದ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ. ಏತನ್ಮಧ್ಯೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಂಪುಟ ಸಹದ್ಯೋಗಿಗಳು ಮತ್ತು ಕುಟುಂಬದವರ ಜೊತೆ ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ.