ಬಾಕ್ಸೈಟ್‌ ಗಣಿಗಾರಿಕೆ: ಉನ್ನತ ಮಟ್ಟದ ವಿಚಾರಣೆಗೆ ಶಿಫಾರಸು ಮಾಡಲು ನಿರ್ಧಾರ

ಮಂಗಳೂರು, ಅ.೩೧- ಮುಡಿಪು ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ನಡೆಯುತ್ತಿರುವ ಬಾಕ್ಸೈಟ್ ಗಣಿಗಾರಿಕೆ ಬಗ್ಗೆ ಉನ್ನತ ಮಟ್ಟದ ವಿಚಾರಣೆ ಕೋರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದ್ದಾರೆ.

ಅಕ್ರಮ ಬಾಕ್ಸೈಟ್ ಗಣಿಗಾರಿಕೆ ಅನುಮತಿಯಿಲ್ಲದೆ ನಡೆಯುತ್ತಿದೆ ಹಾಗೂ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಮಾಧ್ಯಮಗಳು ಮಾಡಿರುವ ವರದಿಗಳ ಆಧಾರದ ಮೇಲೆ, ತನಿಖೆ ನಡೆಸಲೆಂದು ಜಿಲ್ಲಾಧಿಕಾರಿಗಳು ಏಳು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಿದ್ದರು. ಗಣಿಗಾರಿಕೆ ವಿಭಾಗದ ಉಪನಿರ್ದೇಶಕರು ಈ ತಂಡದ ನೇತೃತ್ವ ವಹಿಸಿದ್ದರು. ತಂಡವು ಬಾಕ್ಸೈಟ್ ಗಣಿಗಾರಿಕೆಯ ಬಗ್ಗೆ ಗಮನಹರಿಸಿ ತನ್ನ ವರದಿಗಳನ್ನು ಸಲ್ಲಿಸಿದ್ದು ಅದು ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಆದ್ದರಿಂದ ಈ ವಿಷಯದ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ಸಾಮಾನ್ಯ ಖನಿಜಗಳಾಗಿದ್ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತನಿಖೆ ನಡೆಸಬಹುದಾಗಿತ್ತು. ಆದರೆ ಬಾಕ್ಸೈಟ್ ಬಳ್ಳಾರಿಯ ಕಬ್ಬಿಣದ ಅದಿರಿನಂತಹ ಪ್ರಮುಖ ಖನಿಜವಾಗಿದೆ. ಆದ್ದರಿಂದ, ರಾಜ್ಯ ಗಣಿ ಇಲಾಖೆಯಿಂದ ತನಿಖೆ ನಡೆಸುವುದು ಸೂಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡುವಾಗ ಜಿಲ್ಲಾ ಮಟ್ಟದ ಸಮಿತಿ ವರದಿಯ ತಾಂತ್ರಿಕ ಅಂಶಗಳನ್ನು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 2014-15ರಲ್ಲಿ ಗಣಿಗಾರಿಕೆ ಪರವಾನಗಿಯನ್ನು ನೀಡಲಾಗಿದ್ದು ಒಂದು ವರ್ಷದೊಳಗೆ ಗಣಿಗಾರಿಕೆಯನ್ನು ಪ್ರಾರಂಭಿಸಲು ಸೂಚಿಸಲಾಗಿತ್ತು. ಆದರೆ ಐದು ವರ್ಷಗಳ ಅಂತರದಲ್ಲಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ತನಿಖಾ ವರದಿ ತಿಳಿಸಿದೆ. ಗಣಿಗಾರಿಕೆ ನಡೆಯುತ್ತಿರುವ ಸ್ಥಳದಲ್ಲಿ ಕೆಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿದ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಸರಕ್ಕೆ ಹಾನಿಯಾಗಿದೆ ಎಂದು ದೃಢಪಡಿಸಿದ್ದಾರೆ. ಅಲ್ಲಿ ಗಣಿಗಾರಿಕೆ ಮುಂದುವರಿದರೆ ಭೂಕುಸಿತ ಸಂಭವಿಸಬಹುದು ಎಂಬ ಆತಂಕವನ್ನು ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.