ಕೋಲಾರ, ಜೂ.೨೨- ರೈತರ ಹೈನೋದ್ಯಮದಲ್ಲಿ ಬಾಕಿ ಇರುವ ಕ್ಷೀರಭಾಗ್ಯ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿ ಬಿ.ಎಂ.ಸಿ.ಗಳ ಕಲಬೆರಕೆ ದಂದೆಗೆ ಕಡಿವಾಣ ಹಾಕುವಂತೆ ರೈತ ಸಂಘದಿಂದ ಹಾಲು ಒಕ್ಕೂಟದ ವ್ಯವಸ್ಥಾಪಕರಿಗೆ ಮನವಿ ನೀಡಿ ಒತ್ತಾಯಿಸಲಾಯಿ
ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ ರೇಷ್ಮೆ, ಮಾವು, ಟೆಮೊಟೋ ಬೆಳೆಗಳಿಗೆ ಬಾದಿಸುತ್ತಿರುವ ರೋಗಗಳಿಂದ ತತ್ತರಿಸಿ ಹಾಕಿದ ಬಂಡವಾಳ ಕೈಗೆ ಸಿಗದೆ ಸಂಕಷ್ಟದಲ್ಲಿದ್ದ ರೈತರ ಕೈ ಹಿಡಿದ ಹೈನೋದ್ಯಮ ಇಂದು ದಿನೇ ದಿನೇ ನಷ್ಟದ ಸುಳಿಯಲ್ಲಿ ಸಿಲುಕುತ್ತಿದೆ. ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಸರ್ಕಾರದ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹೈನೋದ್ಯಮದ ಅಭಿವೃದ್ದಿಗೆ ಸರ್ಕಾರ ಮನಸ್ಸು ಮಡಬೇಕಾಗಿದೆ. ಕಳೆದ ೭ ತಿಂಗಳಿಂದ ರೈತರಿಗೆ ಕ್ಷೀರಭಾಗ್ಯ ಪ್ರೋತ್ಸಾಹ ಧನ, ಸೇರಿಲ್ಲ ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆಯಲ್ಲಿ ರೈತರು ತೊಡಗಿಸಿಕೊಂಡಿರುತ್ತಾರೆ. ಮುಂಗಾರು ಮಳೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಸೇರಿದಂತೆ ಹಲವು ಖರ್ಚು ವೆಚ್ಚಗಳಿಗೆ ಹೈನುಗಾರಿಕೆಯಿಂದ ಬರುವ ಹಣವೇ ಆದಾಯವಾಗಿರುತ್ತದೆ. ಆದರೆ ೭ ತಿಂಗಳ ಹಣವನ್ನು ಬಾಕಿ ಉಳಿಸಿಕೊಂಡಿರುವುದು ನ್ಯಾಯವಲ್ಲವೆಂದು ಸರ್ಕಾರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಟ್ಟು ೧೪ ಹಾಲು ಒಕ್ಕೂಟಗಳಿದ್ದು, ಇದರಲ್ಲಿ ೩೫ ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಸಂಘಗಳಲ್ಲಿ ೨೪ ಲಕ್ಷ ಮಂದಿ ನೊಂದಾಯಿತ ಹಾಲು ಉತ್ಪಾದಕರಿದ್ದಾರೆ. ಇವರಲ್ಲಿ ನಿತ್ಯ ೯ ಲಕ್ಷ ಮಂದಿ ರೈತರು ಹಾಲು ಸರಬರಾಜು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಹೈನುಗಾರಿಕೆ ನಡೆಸುವ ರೈತರಿಗೆ ಅನುಕೂಲವಾಗಿಲಿ ಎಂಬ ಕಾರಣದಿಂದ ಕ್ಷೀರದಾರೆ ಹೆಸರಿನಲ್ಲಿ ಪ್ರತಿಯೊಬ್ಬ ರೈತರಿಗೆ ಲೀಟರ್‌ಗೆ ೫ ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದ್ದು, ಈಗ ಆ ಹಣವನ್ನು ಬಿಡುಗಡೆ ಮಾಡದೆ ಸಂಕಷ್ಟದಲ್ಲಿ ಹಾಲು ಉತ್ಪಾದಕರು ಸಿಲುಕಿದ್ದಾರೆಂದು ಸರ್ಕಾರಕ್ಕೆ ಮನವರಿಕೆ ಮಾಡಿದರು.
ರೈತ ಮಹಿಳೆ ಚೌಡಮ್ಮ ಮಾತನಾಡಿ ರೈತರ ಹಾಲು ಉತ್ಪಾದನೆಯು ಪ್ರಸ್ತುತದಲ್ಲಿ ಕಷ್ಟಕರವಾಗಿದೆ. ಸ್ವಂತ ಮೇವಿನ ವ್ಯವಸ್ಥೆ ಇದ್ದಲ್ಲಿ ಪ್ರತಿ ಲೀಟರ್‌ಗೆ ೨೨ ರಿಂದ ೨೪ ರೂ. ವೆಚ್ಚವಾಗುತ್ತಿದೆ. ಮೇವು ಖರೀದಿಸಿದರೆ ೩೦ ರೂ ದಾಟುತ್ತದೆ. ಜೊತೆಗೆ ಖಾಸಗಿ ಅಂಗಡಿ ಮಾಲೀಕರು ಇಂಡೀ ಬೂಸವನ್ನು ತಮಗೆ ಇಷ್ಟಬಂದ ರೀತಿ ದುಬಾರಿ ಬೆಲೆಗೆ ಮಾರಾಟ ಮಾಡುವುದರಿಂದ ರೈತರಿಗೆ ತುಂಬಾ ತೊಂದರೆಯಲ್ಲಿದ್ದಾರೆ. ಸರ್ಕಾರ ಕೂಡಲೇ ಸ್ಪಂಧಿಸಬೇಕೆಂದು ಮನವಿ ಮಾಡಿದರು.
ಹೈನೋದ್ಯಮವನ್ನೇ ನಂಬಿ ರೈತರು ಖಾಸಗಿ ಸಾಲ ಮಕ್ಕಳ ವಿದ್ಯಾಭ್ಯಾಸ ಹಿರಿಯರ ಅರೋಗ್ಯ ಮತ್ತಿತರ ಖರ್ಚು ವೆಚ್ಚಗಳಿಗೆ ಇದನ್ನೇ ನಂಬಿರುವುದರಿಂದ ಸರ್ಕಾರ ಕೂಡಲೇ ರೈತರ ಕಷ್ಟಗಳಿಗೆ ಸ್ಪಂಧಿಸಿ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು. ಜೊತೆಗೆ ಬಿ.ಎಂ.ಸಿ.ಗಳಲ್ಲಿ ಹಾಲು ಶೇಕರಣೆ ಮಾಡಿದ ನಂತರ ಡೈರಿಗಳಿಗೆ ಸರಬರಾಜು ಮಾಡುವ ಲಾರಿಗಳ ಚಾಲಕರು ಹಾಗೂ ಸಿಬ್ಬಂದಿ ನೀರಿನ ಮಿಶ್ರಣ ಮಾಡುವ ಮುಖಾಂತರ ಕಲಬೆರಿಕೆ ದಂದೆ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಪ್ರತಿ ಬಿ.ಎಂ.ಸಿ. ಲಾರಿಗೆ ಜಿ.ಪಿ.ಎಸ್. ಅಳವಡಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮಾರುಕಟ್ಟೆ ವ್ಯವಸ್ಥಾಪಕರಾದ ಡಾ.ಶ್ರೀನಿವಾಸಗೌಡ ಮಾತನಾಡಿ ಪ್ರೋತ್ಸಾಹ ಧನವನ್ನು ಹಂತ ಹಂತವಾಗಿ ಈ ವಾರದಲ್ಲಿ ಬಿಡುಗಡೆ ಮಾಡುವ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಜಿಲ್ಲಾಕಾಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಜುಳಾ, ರತ್ನಮ್ಮ, ವೆಂಕಟಮ್ಮ, ಬೈರಮ್ಮ, ಬಯ್ಯಮ್ಮ ಗೀರೀಶ್, ಮಂಗಸಂದ್ರ ತಿಮ್ಮಣ್ಣ, ಮುಂತಾದವರು ಪಾಲ್ಗೊಂಡರು.