ಬಾಕಿ ಹಣ ಬಿಡುಗಡೆಗೆ ಕಬ್ಬು ಬೆಳೆಗಾರರ ಒತ್ತಾಯ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.28:- ಸರ್ಕಾರ ಕಬ್ಬು ಬೆಳೆಗಾರರನ್ನು ಉತ್ತೇಜಿಸುವ ಸಲುವಾಗಿ ಪ್ರತಿ ಟನ್ ಗೆ 150ರೂಗಳನ್ನು ಬಿಡುಗಡೆಗೊಳಿಸಿದ್ದು, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ರೈತರ ಪಾಲಿನ ಹೆಚ್ಚುವರಿ ಹಣವನ್ನು ಬಿಡುಗಡೆಗೊಳಿಸಿದ ನಂತರವಷ್ಟೇ ಕಬ್ಬು ಅರೆಯಲು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ತಾಲೂಕು ಕಬ್ಬು ಬೆಳೆಗಾರರ ಸಂಘವು ಪ್ರತಿಭಟನೆ ನಡೆಸಿತು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಬಣ್ಣಾರಿ ಅಮ್ಮನ್ ಕಾರ್ಖಾನೆಯ ಉಪಕಚೇರಿಗೆ ಬೀಗ ಜಡಿದು ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ಈ ಬಗ್ಗೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ, ಮೊನ್ನೆಯಷ್ಟೇ ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಯಲ್ಲಿ ಬಣ್ಣಾರಿ ಅಮ್ಮನ್ ಕಾರ್ಖಾನೆಯ ವ್ಯವಸ್ಥಾಪಕರು 2021-22ಸಾಲಿನ ರೈತರ ಪಾಲಿನ ಹೆಚ್ಚುವರಿ ಹಣವನ್ನು ನೀಡುವುದಾಗಿ ಒಪ್ಪಿಕೊಂಡಿದ್ದರು.ಆದರೆ,ಇದುವರೆಗೂ ರೈತರ ಹಣ ಬಿಡುಗಡೆಗೊಂಡಿಲ್ಲ.ರೈತರಿಗೆ ಕಾರ್ಖಾನೆಯ ಮಾಲೀಕರು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಖಾನೆಯು ಕಬ್ಬು ಅರೆಯಲು ಪ್ರಾರಂಭಿಸಿದ್ದು, ಮೊದಲು ರೈತರ ಹೆಚ್ಚುವರಿ ಹಣ ಪ್ರತಿ ಟನ್ ಗೆ 150ರೂಗಳನ್ನು ಬಿಡುಗಡೆಗೊಳಿಸಿದ ನಂತರ ಕಬ್ಬು ಅರೆಯಲು ಪ್ರಾರಂಭಿಸಬೇಕು.ಇಲ್ಲವಾದಲ್ಲಿ ಮೈಸೂರು -ಚಾಮರಾಜನಗರ ವ್ಯಾಪ್ತಿಯಲ್ಲಿರುವ ಬಣ್ಣಾರಿ ಅಮ್ಮನ್ ಕಾರ್ಖಾನೆಯ ಎಲ್ಲ ಉಪ ಕಚೇರಿಗಳು ಕಾರ್ಯ ನಿರ್ವಹಿಸಲು ಬಿಡುವುದಿಲ್ಲ,ಕಬ್ಬು ಸಾಗಿಸಲು ಅವಕಾಶ ನೀಡುವುದಿಲ್ಲ.
ರೈತರ ಪಾಲಿನ ಹಣ ಬಿಡುಗಡೆ ಮಾಡದೆ ಕಬ್ಬು ಅರೆಯಲು ಪ್ರಾರಂಭಿಸಿದಲ್ಲಿ ಕಾರ್ಖಾನೆಯ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು.ಹೋರಾಟದಿಂದ ಆಗುವ ತೊಂದರೆಗಳಿಗೆ ಕಾರ್ಖಾನೆಯ ಮಾಲೀಕರೇ ನೇರ ಹೊಣೆ ಆಗಬೇಕಾಗುತ್ತೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್,ಸ ಬ್ಯಾಂಗಲ್ ಸ್ಟೋರ್ ಅಪ್ಪಣ್ಣ,ಬಿ. ಪಿ.ಪರಶಿವಮೂರ್ತಿ,ಹ್ಯಾಕನೂರು ರಾಜೇಶ್,ನಿಂಗರಾಜು, ಗುರುಸ್ವಾಮಿ,ಉಮೇಶ್, ಯೋಗೇಶ್, ಸತೀಶ್.ಕುಮಾರ್. ಮಹೇಶ್,ಮಲ್ಲಣ್ಣ ಇನ್ನಿತರರು ಭಾಗವಹಿಸಿದ್ದರು.