ಬಾಕಿ ವೇತನ, ಗ್ರಾಜ್ಯುಟಿ, ಪಿಎಫ್‌ಗೆ ಕಾರ್ಮಿಕರ ಆಗ್ರಹ

ಬಾಕಿ ವೇತನ, ಗ್ರಾಜ್ಯುಟಿ, ಪಿಎಫ್‌ಗೆ ಕಾರ್ಮಿಕರ ಆಗ್ರಹ

ರಾಯಚೂರು, ಜ. ೨೫- ಬಾಕಿ ವೇತನ ಗ್ರಾಜ್ಯುಟಿ, ಪಿಎಫ್ ಹಣ ಭರಿಸುವುದು ಸೇರಿದಂತೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಮಾಡಿರುವ ಲೂಟಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸದಿಂದರೆ ಸ್ಪಿನ್ನಿಂಗ್ ಮಿಲ್ ಮುಂಭಾಗ ಸ್ಥಳದಲ್ಲಿ ಶೆಡ್ ಗಳನ್ನು ಹಾಕಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಯರಮರಸ್ ಸಹಕಾರಿ ನೂಲಿನ ಗಿರಣಿಯ ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.
ಯರ್‌ಮರಸ್ ನೂಲಿನ ಗಿರಣಿಯಲ್ಲಿ ಕಳೆದ ೨೭ ವರ್ಷಗಳಿಂದ ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ. ಆದರೆ ಕಾರ್ಮಿಕರಿಗೆ ನಿಯಮಾನುಸಾರ ದೊರೆಯಬೇಕಿದ್ದ ಬಾಕಿ ವೇತನ ಗ್ರಾಜ್ಯುಟಿ, ಪಿಎಫ್ ಹಣವನ್ನು ಮಿಲ್ ಆಡಳಿತ ಸ್ಥಗಿತಗೊಳಿಸಿದೆ. ಈ ಸಂಬಂಧ ಅನೇಕ ಮನವಿಗಳನ್ನು ಸಲ್ಲಿಸಿದ್ದರೂ ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿಲ್ಲ ಎಂದು ಕಾರ್ಮಿಕ ಮುಖಂಡ ವೈ. ರುದ್ರಗೌಡ ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದರು.
ಕಾರ್ಮಿಕರನ್ನು ವಂಚಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ನೂಲಿನ ಗಿರಣಿಯನ್ನು ಮಾರಾಟ ಮಾಡಲಾಗಿದೆ. ಹರಾಜಿನಲ್ಲಿ ಖರೀದಿಸಿದ ವ್ಯಕ್ತಿಗೆ ನಿಯಮಬಾಹಿರವಾಗಿ ಅನುಕೂಲ ಮಾಡಕೊಡಲಾಗುತ್ತಿದೆ. ಈ ಮೂಲಕ ಅಧಿಕಾರಿಗಳು ಕಾರ್ಮಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ಜಿಲ್ಲಾ ಜಂಟಿ ರಿಜಿಸ್ಟ್ರರ್ ಮತ್ತು ಜಿಲ್ಲಾಧಿಕಾರಿಗಳ ನಡೆ ಕಾರ್ಮಿಕರಿಗೆ ಸಂಕಷ್ಟ ತಂದೊಡ್ಡಿದೆ. ಉದ್ಯೋಗ ಹಾಗೂ ವೇತನ ವಂಚನೆ ಕಾರ್ಮಿಕರ ಮಕ್ಕಳ ಭವಿಷ್ಯದ ಮೇಲೂ ಪರಿಣಾಮ ಬೀರಿದೆ. ಈ ಮೂಲಕ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ ರುದ್ರಗೌಡ ನೂಲಿನ ಗಿರಿಣಿ ಹರಾಜು ಮಾಡಿದ ೩.೦೮ ಕೋಟಿ ಹಣದಲ್ಲಿ ಕಾರ್ಮಿಕರ ಬಾಕಿ ವೇತನ ಗ್ರಾಜ್ಯುಟಿ ಹಣವನ್ನು ಪಾವತಿಸಬೇಕು.
ಕಾನೂನುಬಾಹಿರವಾಗಿ ನೂಲಿನ ಗಿರಿಣಿಯನ್ನು ಖಾತಾ ಬದಲಾವಣೆ ಮಾಡಿ ಇತರರಿಗೆ ಪರಾಭಾರೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂದಿನ ಸಹಾಯಕ ಆಯುಕ್ತ ಮಧುಕೇಶ್ವರ್ ಜಮೀನನ್ನು ಸರ್ಕಾರ ಪಾಣಿಯಲ್ಲಿ ನಮೂದಿಸಲು ಆದೇಶ ನೀಡಿದನ್ನು ಕಾನೂನುಬಾಹಿರವಾಗಿ ಉಲ್ಲಂಘಿಸಿರುವುದು ಸೇರಿದಂತೆ ಕಾರ್ಮಿಕರಿಗೆ ಆಗಿರುವ ಎಲ್ಲಾ ರೀತಿ ವಂಚನೆಗಳನ್ನು ಸರಿಪಡಿಸದಿದ್ದರೆ ಧರಣಿ ಅನಿವಾರ್‍ಯ ಎಂದು ಜಿಲ್ಲಾಧಿಕಾರಿಗೆ ಎಚ್ಚರಿಸಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ರಜಬ್‌ಆಲಿ, ಪ್ರಧಾನ ಕಾರ್ಯದರ್ಶಿ ರಸುಲ್ ಅಹ್ಮದ್, ಜಂಟಿ ಕಾರ್ಯದರ್ಶಿ ಈರಣ್ಣ, ಖಜಾಂಚಿ ವೆಂಕೋಬ ಇದ್ದರು.