ಬಾಕಿ ವೇತನಕ್ಕಾಗಿ ಪೌರ ಕಾರ್ಮಿಕರಿಂದ ಪಾಲಿಕೆಗೆ ಮುತ್ತಿಗೆ

ಕಲಬುರಗಿ: ನ. 18: ಕಳೆದ ಮೂರು ತಿಂಗಳಿನಿಂದಲೂ ವೇತನ ಪಾವತಿಸಿಲ್ಲ ಎಂದು ಆರೋಪಿಸಿ ಉದ್ರಿಕ್ತ ಪೌರ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಶನಿವಾರ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ, ಪ್ರತಿಭಟನಾ ಧರಣಿ ಮಾಡಿದರು.

ಪೌರ ಕಾರ್ಮಿಕರು ಮಹಾನಗರ ಪಾಲಿಕೆಯ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಹೋರಾಟದ ನೇತೃತ್ವ ವಹಿಸಿದ್ದ ಭಾರತಬಾಯಿ ಹತ್ತರಕಿ ಅವರು ಮಾತನಾಡಿ, ಕಳೆದ ಮೂರು ತಿಂಗಳಿಂದ ವೇತನವಿಲ್ಲದೇ ನಾವು ಅತ್ಯಂತ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಅತ್ಯಂತ ಕಡುಬಡತನ ಹೊಂದಿದ್ದು, ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಸಹ ಅಲ್ಪ ವೇತನವನ್ನೂ ಸಹ ಸಕಾಲಕ್ಕೆ ಪಾವತಿಸದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಈಗಾಗಲೇ ಮೂರು ತಿಂಗಳಿನಿಂದ ವೇತನ ಕೊಟ್ಟಿಲ್ಲ. ಈ ಹಿಂದೆ ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಎಲ್ಲರೂ ಪ್ರತಿಭಟನೆ ಮಾಡಿದಾಗ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಮಧ್ಯಪ್ರವೇಶಿಸಿ ವೇತನ ಪಾವತಿಯ ಭರವಸೆ ನೀಡಿದ್ದರು. ಆದಾಗ್ಯೂ, ವೇತನ ಪಾವತಿಸಿಲ್ಲ. ಹೀಗಾಗಿ ದೀಪಾವಳಿ ಸೇರಿದಂತೆ ಹಬ್ಬ ಹರಿದಿನಗಳನ್ನು ವೇತನವಿಲ್ಲದೇ ಅತ್ಯಂತ ಸಂಕಷ್ಟದಲ್ಲಿ ಆಚರಿಸಿದ್ದೇವೆ ಎಂದು ಅವರು ಹೇಳಿದರು.
ಕೂಡಲೇ ಬಾಕಿ ವೇತನ ಪಾವತಿಯಾಗಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ್ ಪಾಟೀಲ್ ಅವರು ಮಾತನಾಡಿ, ಪೌರ ಕಾರ್ಮಿಕರ ವೇತನ ಪಾವತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪೌರ ಕಾರ್ಮಿಕರ ವೇತನ ಪಾವತಿಗಾಗಿಯೇ ನಾವು 2.50 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದೇವೆ. ಸಾಮಾನ್ಯ ವಿಭಾಗದಲ್ಲಿ ಒಂದು ಕೋಟಿ ರೂ.ಗಳ ಸಂಗ್ರಹವಾಗಿದೆ. ಒಟ್ಟು ಎರಡು ಚೆಕ್‍ಗಳನ್ನು ಸಿದ್ಧಪಡಿಸಲಾಗಿದ್ದು, ಬ್ಯಾಂಕಿಗೆ ಹೋಗಿ ನಿಮ್ಮ ವೇತನವನ್ನು ಖಾತೆಯ ಮೂಲಕ ಜಮೆ ಮಾಡಲಾಗುವುದು ಎಂದು ಅವರು ಹೇಳಿದರು.
ಪಾಲಿಕೆಯ ಆಯುಕ್ತರು ಕೊಟ್ಟ ಭರವಸೆಯಿಂದ ಪ್ರತಿಭಟನೆ ಹಿಂಪಡೆದ ಪೌರ ಕಾರ್ಮಿಕರು, ಸಂಜೆಯೊಳಗೆ ಬಾಕಿ ವೇತನ ಪಾವತಿಯಾಗದೇ ಹೋದಲ್ಲಿ ಭಾನುವಾರ ಬೆಳಿಗ್ಗೆಯೇ ಮತ್ತೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಪೌರ ಕಾರ್ಮಿಕರು ಬೇಕ್, ಬೇಕ್ ಪಗಾರ್ ಬೇಕ್, ಆವಾಜ್ ದೋ ಹಮ್ ಏಕ್ ಹೈ ಎಂಬ ಘೋಷಣೆಗಳನ್ನು ಕೂಗಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಮಹಾನಗರ ಪಾಲಿಕೆಯ ಕಾರ್ಮಿಕರ ಸಂಘದ ಅಧ್ಯಕ್ಷೆ ಶ್ರೀಮತಿ ಭಾರತಬಾಯಿ ಹತ್ತರಕಿ ಅವರ ನೇತೃತ್ವದಲ್ಲಿ ನಡೆದ ಪ್ರಖರ ಪ್ರತಿಭಟನೆಯಲ್ಲಿ ಕಳಸಮ್ಮ ಸಾಯಮ್ಮ, ರತ್ನಾಬಾಯಿ, ಜಗದೇವಿ, ಶಿವಶರಣಪ್ಪ ಹೊಸಮನಿ, ರಾಣೋಜಿ ಸೇರಿದಂತೆ ನೂರಾರು ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.