ಬಾಕಿ ಪ್ರೋತ್ಸಾಹ ಧನ ಬಿಡುಗಡೆಗೆ ಹಾಲು ಸಂಘಗಳ ಒತ್ತಾಯ

ಕೋಲಾರ,ಜೂ,೯- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಸುಮಾರು ೬೬೯.೫೦ ಕೋಟಿ ರೂ ಹಾಲಿನ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿ ಕೊಂಡಿದ್ದು ಇದನ್ನು ಕೊಡಲೇ ಬಿಡುಗಡೆ ಮಾಡ ಬೇಕೆಂದು ಹಾಲಿನ ಸಂಘಗಳು ಒತ್ತಾಯಿಸಿದೆ.
ಈ ರಾಜ್ಯ ಸರ್ಕಾರವು ಹೈನುಗಾರಿಕೆಗೆ ಅನುಕೊಲವಾಗಲು ರೈತರಿಗೆ ಪ್ರತಿ ಲೀಟರ್ ಹಾಲಿಗೆ ೫ ರೂ ಪ್ರೋತ್ಸಾಹ ಧನವನ್ನು ನೀಡುತ್ತಾ ಬಂದಿದೆ. ಇದರಿಂದ ಹೈನುದ್ಯಮದ ರೈತರ ಉತ್ಪಾದನೆ ಮಾಡಿದ ಹಾಲಿಗೆ ಲಾಭಾದಾಯಕ ದರ ಸಿಕ್ಕಿದಂತಾಗಿತ್ತು, ಅಲ್ಲದೆ ರೈತರ ಖಾತೆಗೆ ಪ್ರೋತ್ಸಾಹ ಧನವು ಜಮೆಯಾಗುತ್ತಿತ್ತು, ಇದರಿಂದ ರೈತರು ಮೇವು, ಪಶು ಆಹಾರಗಳನ್ನು ಖರೀದಿಸಲು ಈ ಪ್ರೋತ್ಸಾಹ ಧನ ಅನುಕೂಲವಾಗುತ್ತಿತ್ತು.
ಅದರೆ ಹಿಂದಿನ ಸರ್ಕಾರವು ಕಳೆದ ೭ ತಿಂಗಳಿಂದ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿರುವುದಿಲ್ಲ. ಇದರಿಂದ ಹೈನುಗಾರಿಕೆ ಉದ್ಯಮಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಪ್ರತಿ ರೈತನಿಗೆ ಕನಿಷ್ಟ ೫ ಸಾವಿರದಿಂದ ಗರಿಷ್ಟ ೩೦ ಸಾವಿರದ ವರೆಗೆ ಪ್ರೋತ್ಸಾಹ ಧನವು ಬಾಕಿ ಉಳಿಸಿ ಕೊಂಡಿದೆ. ಪ್ರತಿ ತಿಂಗಳು ಸರ್ಕಾರವು ರಾಝ್ಯದ ಎಲ್ಲ ರೈತರಿಗೂ ಸುಮಾರು ಒಟ್ಟು ೧೦೯ ಕೋಟಿ ರೂ ಹಾಲಿನ ಪ್ರೋತ್ಸಾಹ ದರವನ್ನು ನೀಡ ಬೇಕಾಗಿತ್ತುಎಂದು ತಿಳಿಸಿವೆ.
ಸಾಮಾನ್ಯ ವರ್ಗದ ಹೈನುಗಾರರಿಗೆ ಕಳೆದ ೨೦೨೨ರ ನವೆಂಬರ್‌ನಲ್ಲಿ ೧೦೯.೯೦ ಕೋಟಿ ರೂ, ಡಿಸೆಂಬರ್ ಮಾಹೆಯಲ್ಲಿ ೧೦೯,೮೧ ಕೋಟಿ ರೂ, ೨೦೨೩ ಜನವರಿ ಮಾಹೆಯಲ್ಲಿ ೧೦೭,೮೯ ಕೋಟಿ ರೂ ಫೆಬ್ರವರಿಯಲ್ಲಿ ೯೩.೫೬ ಕೋಟಿ ರೂ, ಮಾರ್ಚ್‌ನಲ್ಲಿ ೯೩.೮೯ ಕೋಟಿ ರೂ, ಏಪ್ರಿಲ್ ಮಾಹೆಯಲ್ಲಿ ೯೩.೫೭ ಕೋಟಿ ರೂಗಳು ಮೇ ತಿಂಗಳಲ್ಲಿ ೯೩.೪೮ ಕೋಟಿ ರೂ ಬಾಕಿ ಇರಿಸಿ ಕೊಂಡಿದೆ.
ಎಸ್.ಸಿ.ವರ್ಗಕ್ಕೆ ೨೦೨೩ರ ಮಾರ್ಚ್ ಮಾಹೆಯಲ್ಲಿ ೩.೦೮ ಕೋಟಿ ರೂ ಏಪ್ರಿಲ್‌ನಲ್ಲಿ ೩,೧೭ ಕೋಟಿ ರೂ ಸಹಾಯ ಧನ ವಿತರಣೆ ಬಾಕಿ ಉಳಿಸಿ ಕೊಂಡಿದೆ.
ಹಾಗೇಯೇ ಹಿಂದಿನ ವರ್ಷಗಳ ಪೈಕಿ ಸಾಮಾನ್ಯ ವರ್ಗದವರಿಗೆ ೨೦೧೯-೨೦ನೇ ಸಾಲಿನಲ್ಲಿ ೧೨.೫ ಕೋಟಿ ರೂ ೨೦೨೦-೨೧ ನೇ ಸಾಲಿನಲ್ಲಿ ೯.೬೪ ಕೋಟಿ ರೂ ೨೦೨೧-೨೨ನೇ ಸಾಲಿನಲ್ಲಿ ೨೨.೩೭ ಕೋಟಿ ರೂ ಸೇರಿದಂತೆ ಒಟ್ಟಾರೆ ಕಳೆದ ಅರ್ಥಿಕ ವರ್ಷದಲ್ಲಿ ೬೨೪.೦೬ ಕೋಟಿ ರೂ ಹಾಗೂ ಹಿಂದಿನ ವರ್ಷಗಳ ಬಾಕಿ ೪೫.೫೩ ಕೋಟಿ ರೂ ಸೇರಿದಂತೆ ಒಟ್ಟು ೬೬೯.೫೯ ಕೋಟಿ ರೂನಷ್ಟು ಸರ್ಕಾರದಿಂದ ಹೈನುಗಾರರಿಗೆ ಸಂದಾಯವಾಗ ಬೇಕಾಗಿದೆ.
ಇದರ ಪೈಕಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿರುವ ಕೋಲಾರ ಜಿಲ್ಲೆಗೆ ಸುಮಾರು ೭೦ ಕೋಟಿ ರೂಗಳು ಹಾಲಿನ ಪ್ರೋತ್ಸಾಹ ಧನ ಬಾಕಿ ಇದೆ. ಪಶು ಆಹಾರ, ಮೇವಿನ ಬೆಲೆ ಏರಿಕೆಯಾಗಿದೆ. ಕೆಲವಡೆ ಗಂಟು ರೋಗ,ಜಾನುವಾರುಗಳಿಗೆ ಭಾದಿಸಿ ಇಳುವರಿ ಕಡಿಮೆಯಾಗಿದೆ. ಕೆಲವು ಜಾನುವಾರುಗಳು ಮೃತ ಪಟ್ಟಿದೆ. ಇದರಿಂದ ಹೈನುಗಾರರು ತೀರ ಸಂಕಷ್ಟದಲ್ಲಿದ್ದಾರೆ.