ಬಾಕಿ ಪಾವತಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಸೆ.21:- ಬಾಕಿ ವೇತನ ಪಾವತಿಗಾಗಿ ಇಎಫ್ ಎಂ ಎಸ್ ಗೆ ಸೇರಿದ ಸಿಬ್ಬಂದಿಗಳ ಸೇರ್ಪಡೆ, ಅನುಮೋದನೆ, ಪಂಪ್ ಆಪರೇಟರ್ ರಿಂದ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ಹಾಗೂ ಬಿಲ್ ಕಲೆಕ್ಟರ್ ದಿಂದ ಕಾರ್ಯದರ್ಶಿ ಗ್ರೇಡ್ -2, ಲೆಕ್ಕ ಸಹಾಯಕ ಹುದ್ದೆಗಳ ಬಡ್ತಿ ಮತ್ತು ಇತರೇ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮಪಂಚಾಯತ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾ ಪಂಚಾಯತ್ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೊರೋನಾ ನಿಯಂತ್ರಿಸುವಲ್ಲಿ ಗ್ರಾಮಪಂಚಾಯತ್ ನೌಕರರು ಹಗಲಿರುಳು ದುಡಿಯುತ್ತಿದ್ದಾರೆ. ಕುಡಿಯುವ ನೀರು, ಸ್ವಚ್ಛತೆ, ಲಾಕ್ ಡೌನ್ , ಸೀಲ್ ಡೌನ್ ಮುಂತಾದ ಕೆಲಸಗಳಲ್ಲಿ ವಿಶೇಷವಾಗಿ ಕ್ವಾರೆಂಟೈನ್ ಕ್ಯಾಂಪ್ ಗಳಲ್ಲಿ ದುಡಿದಿದ್ದಾರೆ. ಪಂಚಾಯತ್ ಸಿಬ್ಬಂದಿಗಳಿಗೆ 2017,18,19,ಹಾಗೂ 2020ರಲ್ಲಿಯೂ ಕೂಡ ಸಂಬಳ ಬಾಕಿ ಉಳಿದಿದೆ. ಬಾಕಿ ಉಳಿದ ಸಂಬಳ ಕೊಡಿಸಲು ಸರಕಾರ ತೆರಿಗೆ ಸಂಗ್ರಹದಲ್ಲಿ 14ನೇ ಹಣಕಾಸು ಯೋಜನೆ, 15ನೇ ಹಣಕಾಸಿನ ಯೋಜನೆಯಲ್ಲಿ ಸಂಬಳ ಕೊಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಪಂಚಾಯತ್ ಪಿಡಿಒ ಗಳು ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಜಾರಿ ಮಾಡದೆ ಬಾಕಿ ಉಳಿಸಿಕೊಂಡಿದ್ದು ಹಲವು ಬಾರಿ ಮನವಿ ಮಾಡಿಕೊಂಡರೂ ನೀಡಿಲ್ಲ ಎಂದು ಆರೋಪಿಸಿದರು.
ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ಬಿಲ್ ಕಲೆಕ್ಟರ್, ಗುಮಾಸ್ತ, ಕಂಪ್ಯೂಟರ್ ಆಪರೇಟರ್ ಗಳಿಗೆ 13815.10 ರೂ, ಪಂಪ್ ಆಪರೇಟರ್ 12281.20ರೂ, ಸಿಪಾಯಿ/ಜವಾನ 11703.20ರೂ, ಸ್ವಚ್ಛತೆ ನಡೆಸುವವರಿಗೆ 14563.20ವೇತನ ಜಾರಿ ಮಾಡಬೇಕು.ಬಾಕಿ ವೇತನ ತೆರಿಗೆ ಸಂಗ್ರಹದಲ್ಲಿ 14ನೇ ಮತ್ತು 15ನೇ ಹಣಕಾಸು ಆಯೋಗದ ಹಣದಲ್ಲಿ ಬಾಕಿ ಉಳಿದ ಸಿಬ್ಬಂದಿ ವೇತನ ಪಾವತಿಸುವಂತಾಗಬೇಕು. ನಿವೃತ್ತಿಯಾದವರಿಗೆ 15ತಿಂಗಳು ಗ್ರಾಚ್ಯೂಟಿ ಕೊಡಬೇಕು. ಇಎಫ್ ಎಂಎಸ್ ಬಾಕಿ ಉಳಿದ ಕಸಗುಡಿಸುವ ಮತ್ತು ಪಂಪ್ ಆಪರೇಟರ್ ಹಾಗೂ ಇತರೆ ಸಿಬ್ಬಂದಿಗಳಿಗೆ ಸರ್ಕಾರದ ಆದೇಶದಂತೆ ಸೇರ್ಪಡೆ ಮಾಡಬೇಕು. ಸೇವಾಪುಸ್ತಕ ತೆರೆಯಬೇಕು. ಹೊಸದಾಗಿ ಕಾನೂನು ಬಾಹಿರವಾಗಿ ಅಕ್ರಮ ನೇಮಕಾತಿ ಮಾಡಿಕೊಳ್ಳುವುದನ್ನು ತಡೆಯಬೇಕು. ಈಗಾಗಲೇ ನೇಮಕಾತಿ ಮಾಡಿಕೊಂಡವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ನೇಮಕಾತಿ ರದ್ದು ಮಾಡಬೇಕು. ಬಿಲ್ ಕಲೆಕ್ಟರ್ ಗ್ರೇಡ್-2 ಕಾರ್ಯ ದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು. ಸರ್ಕಾರಿ ಆದೇಶಗಳನ್ನು ಜಾರಿ ಮಾಡದ ಪಿಡಿಒ ಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆ.ಬಸವರಾಜು, ಲೋಕೇಶ್, ಟಿ.ಎಸ್.ದಿನೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.