ಬಾಕಿವೇತನ ಬಿಡುಗಡೆಗಾಗಿ ಬಿಸಿಯೂಟ ತಯಾರಕರ ಪ್ರತಿಭಟನೆ

ದಾವಣಗೆರೆ. ಜ.೪; ಬಿಸಿಯೂಟ ತಯಾರಕರಿಗೆ 4 ತಿಂಗಳ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ನೌಕರರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಕಳೆದ ೧೮ ವರ್ಷಗಳಿಂದ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಸರ್ಕಾರದ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರು ನಿರಂತರವಾಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಆದರೆ ಕಳೆದ ೪ ತಿಂಗಳಿನಿಂದ ಬಿಸಿಯೂಟ ತಯಾರಕರಿಗೆ ವೇತನ ಪಾವತಿಯಾಗಿಲ್ಲ ಇದರಿಂದ ಜೀವನ ಸಾಗಿಸಲು ತೊಂದರೆಯಾಗಿದೆ ಆದ್ದರಿಂದ ಕೂಡಲೇ ಬಾಕಿ ವೇತನ ಪಾವತಿ ಮಾಡಬೇಕು,ಬಿಸಿಯೂಟ ತಯಾರಕರಿಗೆ ಸರ್ಕಾರ ಕನಿಷ್ಟ ಕೂಲಿ ಜಾರಿಗೆ  ತರಬೇಕು.ಬಿಸಿಯೂಟ ತಯಾರಕರಿಗೆ ಕಲ್ಯಾಣ ಮಂಡಳಿ ರಚಿಸಬೇಕು.ಪಿ.ಎಫ್ ಮತ್ತು ಇಎಸ್ ಐ ಜಾರಿಗೊಳಿಸಬೇಕು.ಅಪಘಾತ ಅಥವಾ ಮರಣ ಪರಿಹಾರವಾಗಿ ೫ ಲಕ್ಷ ನೀಡಬೇಕು. ಶಾಲಾ ಸಿಬ್ಬಂದಿ ಎಂದು ಪರಿಗಣಿಸಬೇಕು.ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಹೆಚ್.ಕೆ ರಾಮಚಂದ್ರಪ್ಪ,ಬೆಳಲಗೆರೆ ರುದ್ರಮ್ಮ,ಆವರಗೆರೆ ಚಂದ್ರು,ರಮೇಶ್,ಜ್ಯೋತಿಲಕ್ಷ್ಮಿ, ಲಲಿತಾ ಮತ್ತಿತರರಿದ್ದರು.