ಬಾಂಬ್ ಸ್ಫೋಟ: ಸಿಸಿಬಿಯಿಂದಲೇ ತನಿಖೆ:ಮುಖ್ಯಮಂತ್ರಿ


ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಮಾ.03: ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಪ್ರಕರಣ ಸದ್ಯ ಸಿಸಿಬಿ ಪೊಲೀಸರ ತನಿಖೆಯಲ್ಲಿದೆ. ಎನ್ಐಎ ಗೆ ತನಿಖೆ ಹೊಣೆ ವಹಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಮಲಾಪುರದಲ್ಲಿ ಭಾನುವಾರ ಬೆಳಿಗ್ಗೆ ರಾಜ್ಯ ಮಟ್ಟದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರದವರೆಗೂ  ಯಾರನ್ನೂ ಬಂಧಿಸಿಲ್ಲ. ಈಗ ಏನಾಗಿದೆ ಎಂಬುದನ್ನು ಇನ್ನೂ ಪೊಲೀಸರನ್ನು ಕೇಳಿಲ್ಲ, ಪೊಲೀಸರಿಂದ ಮಾಹಿತಿ ಪಡೆಯುತ್ತೇನೆ ಎಂದರು.
 ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ. ಎಫ್ಎಸ್ ಎಲ್ ವರದಿ ಇನ್ನೂ ಸರ್ಕಾರದ ಕೈ ಸೇರಿಲ್ಲ. ವರದಿ ಬಂದ ಬಳಿಕ ಮುಂದಿನ ಕ್ರಮ ಎಂದು ಅವರು ಹೇಳಿದರು
ಪ್ರತಿ ವರ್ಷವೂ ಪಲ್ಸ್ ಪೋಲಿಯೊ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಹೊಸಪೇಟೆಯ ಕಮಲಾಪೂರದಲ್ಲಿ ರಾಜ್ಯಮಟ್ಟದ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಐದು ವರ್ಷದ ಪ್ರತಿ ಮಗುವಿಗೂ ಪ್ರತಿಯೊಬ್ಬರು ಪೋಲಿಯೊ ಹನಿ ಹಾಕಿಸಬೇಕು ಎಂದರು.
ಸಚಿವ ನಾಗೇಂದ್ರ, ಶಾಸಕ ಎಚ್.ಆರ್.ಗವಿಯಪ್ಪ ಕೆ.ಎಂ.ಎಫ್ ಅಧ್ಯಕ್ಷ ಭೀಮನಾಯ್ಕ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.