ಬಾಂಬ್ ಸ್ಪೋಟ ನಾಲ್ವರು ವಶಕ್ಕೆ

ಸಿಸಿಟಿವಿ ದೃಶ್ಯಾವಳಿಯಲ್ಲಿ ಕ್ಯಾಪ್ ಧರಿಸಿರುವ ವ್ಯಕ್ತಿಯ ಗುರುತು ಪತ್ತೆ.

ಬೆಂಗಳೂರು,ಮಾ.೨- ನಗರವನ್ನು ಬೆಚ್ಚಿಬೀಳಿಸಿರುವ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿರುವ ನಗರ ಪೊಲೀಸರು ತೀವ್ರ ವಿಚಾರಣೆ ಕೈಗೊಂಡು, ಉಗ್ರರ ಕೈವಾಡವಿರುವುದೂ ಸೇರಿದಂತೆ ಎಲ್ಲಾ ಅಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ.
ಈ ಮಧ್ಯೆ ಸಿಸಿಟಿಟಿಯಲ್ಲಿ ಅನುಮಾನಾಸ್ಪದ ಓಡಾಟದೊಂದಿಗೆ ಕಂಡುಬಂದಿದ್ದ ಕ್ಯಾಪ್ ಧರಿಸಿದ ವ್ಯಕ್ತಿಯನ್ನೂ ನಿನ್ನೆ ರಾತ್ರಿಯೇ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಸ್ಫೋಟದ ನಡೆದ ಕೆಲವೇ ಕ್ಷಣದಿಂದಲೇ ಮಿಂಚಿನ ಕಾರ್ಯಾಚರಣೆಗೆ ಇಳಿದಿರುವ ಸಿಸಿಬಿ ಪೊಲೀಸರು, ಕ್ಯಾಪ್ ಹಾಕಿರುವ ವ್ಯಕ್ತಿ ಸೇರಿ ಒಟ್ಟು ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇವರ ವಿಚಾರಣೆ ನಡೆಸಲಾಗುತ್ತಿದೆ.
ಶಂಕಿತ ವ್ಯಕ್ತಿ ಖತರ್ನಾಕ್ ಪ್ಲಾನ್ ಮಾಡಿದ್ದು, ಘಟನೆಯುದ್ದಕ್ಕೂ ಕೈಗೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡಿದ್ದ ಎಂದು ಗೊತ್ತಾಗಿದೆ.
ಬೆರಳಚ್ಚು(ಫಿಂಗರ್ ಪ್ರಿಂಟ್)ಎಲ್ಲಿಯೂ ಉಳಿಯಬಾರದು ಎಂಬ ಕಾರಣಕ್ಕೆ ಹ್ಯಾಂಡ್ ಗ್ಲೌಸ್ ಬಳಸಿದ್ದ. ಹ್ಯಾಂಡ್ ಗ್ಲೌಸ್ ಹಾಕಿಕೊಂಡೇ ಕೆಫೆಯೊಳಗೆ ಬಂದು ಅದೇ ರೀತಿಯಲ್ಲಿ ಹೊರ ಹೋಗಿದ್ದಾನೆ.

ಕುಂದೇನಹಳ್ಳಿಯ ಶ್ರೀರಾಮೇಶ್ವರಂ ಕೆಫೆ ಮುಂಭಾಗ ನಿಂತಿರುವ ಬಾಂಬ್ ನಿಷ್ಕ್ರೀಯ ದಳದ ವಾಹನ

ಸಿಸಿಟಿವಿಯಲ್ಲಿ ಸೆರೆ:
ಕೆಫೆಯಲ್ಲಿ ಬಾಂಬ್ ಇಟ್ಟು ನಾಪತ್ತೆಯಾದ ವ್ಯಕ್ತಿಯ ಚಲನವಲನಗಳ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಕೆಫೆಯಿಂದ ಹೊರ ಬಂದು ವೇಗವಾಗಿ ಹೋಗುತ್ತಿರುವ ವ್ಯಕ್ತಿಯ ಓಡಾಟವನ್ನು ಸಿಸಿಟಿವಿ ಸೆರೆಹಿಡಿದಿತ್ತು. ಆರೋಪಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು, ತಲೆಗೆ ಕ್ಯಾಪ್ ಧರಿಸಿದ್ದಾನೆ. ಈತನ ಅನುಮಾನಾಸ್ಪದ ಓಡಾಟದ ದಾಖಲಾಗಿದೆ. ನಿನ್ನೆ ೧೧:೫೦ಕ್ಕೆ ಕೆಫೆಯಿಂದ ಹೊರ ಬಂದಿರುವ ಈತ ವೇಗವಾಗಿ ಹೊರಟುಹೋಗಿದ್ದಾನೆ.
ರಾಮೇಶ್ವರಂ ಕೆಫೆ ಮುಂದೆಯೇ ಬಿಎಂಟಿಸಿ ಬಸ್ ನಿಲ್ದಾಣವಿದೆ. ಅಲ್ಲೇ ಇರುವ ಹೋಟೆಲ್‌ನ ಹೊರ ಭಾಗದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ.
ಬ್ಯಾಗ್ ನಲ್ಲಿ ಸ್ಫೋಟಕ :
ಬರುವಾಗ ಈತ ಬಸ್ಸಿನಲ್ಲಿ ಬಂದು ಇಳಿದಿದ್ದು ಹೋಗುವಾಗ ಅವಸರದಲ್ಲಿ ನಡೆದುಕೊಂಡು ಹೋಗಿದ್ದಾನೆ,ಆರೋಪಿ ಸೈಡ್ ಬ್ಯಾಗ್ ಹಾಕಿಕೊಂಡು ಬ್ಯಾಗ್ ಒಳಗೆ ಮತ್ತೊಂದು ಬ್ಯಾಗ್‌ನಲ್ಲಿ ಸ್ಫೋಟಕ ತಂದಿರುವುದು ಇನ್ನೊಂದು ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯವಾಗಿದೆ. ಜನರ ಕಣ್ಣಿಗೆ ಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆಯಾಗದ ಜಾಗಕ್ಕೆ ಈತ ಹುಡುಕಾಟ ನಡೆಸಿದ್ದು, ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡೆಸ್ಟ್ ಬಿನ್‌ನಲ್ಲಿ ಬ್ಯಾಗ್ ಬಿಸಾಡಿ ಎಸ್ಕೇಪ್ ಆಗಿದ್ದಾನೆ.

ಕುಂದೇನಹಳ್ಳಿಯ ಶ್ರೀ ರಾಮೇಶ್ವರಂ ಕೆಫೆ ಮುಂಭಾಗ ಸೇರಿರುವ ಸಾರ್ವಜನಿಕರು.

ಎಫ್‌ಐಆರ್ ದಾಖಲು:
ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತು ಹೆಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ ೩೦೭, ೪೭೧ ಮತ್ತು ಯುಎಪಿಎ ಕಾಯ್ದೆಯ ೧೬, ೧೮, ೩೮ ಹಾಗೂ ಎಕ್ಸ್ ಪೋಲಿಸಿವ್ ಸಬ್ಸ್ ಟೆಕ್ಸ್ ಕಾಯ್ದ ೩ಮತ್ತು ೪ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.
ನಿನ್ನೆ ಮಧ್ಯಾಹ್ನ ೧೨.೫೫ಕ್ಕೆ ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡು ಒಟ್ಟು ಹತ್ತು ಜನ ಗಾಯಗೊಂಡಿದ್ದರು. ಎನ್‌ಎಸ್‌ಜಿ ಬಾಂಬ್ ಸ್ಕ್ವಾಡ್ ವಿಂಗ್‌ನಿಂದಲೂ ಕಾರ್ಯಾಚರಣೆ ತೀವ್ರಗೊಂಡಿದ್ದು, ಸ್ಪೋಟ ನಡೆದ ಸ್ಥಳದಲ್ಲಿ ಇಂಚಿಂಚು ಪರಿಶೀಲನೆ ನಡೆಸಿದ್ದಾರೆ.
ಹೆಚ್ಚಿನ ಭದ್ರತೆ:
ಕೆಫೆ ಸ್ಫೋಟ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಎಂದಿನಂತೆ ಭದ್ರತೆ ಮುಂದುವರಿದಿದೆ. ಯಾವುದೇ ರೀತಿಯ ಹೆಚ್ಚುವರಿ ಭದ್ರತೆಯನ್ನು ರೈಲ್ವೇ ಇಲಾಖೆ ಆಯೋಜನೆ ಮಾಡಿಲ್ಲ. ನಿನ್ನೆ ನಡೆದ ಘಟನೆ ಬಳಿಕ ಭದ್ರತೆ ತೀವ್ರ ಮಾಡುವ ನಿರೀಕ್ಷೆ ಇತ್ತು. ರಾಜ್ಯದ ನಾನಾ ಜಿಲ್ಲೆಗಳಿಂದ, ದೇಶದ ನಾನಾ ಭಾಗಗಳಿಂದ ಬಂದು ತಲುಪುವ ಪ್ರಮುಖ ಭಾಗದಲ್ಲಿ ಹೆಚ್ಚಿನ ಎಚ್ಚರ ತೆಗೆದುಕೊಂಡಿಲ್ಲ.
ನಿನ್ನೆ ಶಂಕಿತ ವ್ಯಕ್ತಿ ಓಡಾಡಿರಬಹುದಾದ ಬಿಎಂಟಿಸಿ ಬಸ್‌ಗಳಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟು ೫ ಡಿಪೋಗಳ ವೋಲ್ವೋ ಬಸ್‌ಗಳ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಲಾಗಿದೆ. ಶಂಕಿತ ಬಂದು ಹೋಗಿರುವ ಬಸ್‌ಗಳಲ್ಲಿ ಪರಿಶೀಲನೆ ಮಾಡಲಾಗಿದೆ.

ನಗರದ ಕುಂದೇನಹಳ್ಳಿಯ ಶ್ರೀರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿರುವುದು.

ಕುರುಹು ಲಭ್ಯ:
ಗೃಹ ಪರಮೇಶ್ವರ್ ಪ್ರಕರಣದ ತನಿಖೆಯು ಎಲ್ಲಾ ಅಯಾಮಗಳಲ್ಲಿ ನಡೆಸಲು, ಅನೇಕ ತಂಡಗಳನ್ನು ರಚನೆ ಮಾಡಲಾಗಿದೆ.ಕೃತ್ಯದ ಕೆಲವು ಕುರುಹು ಸಿಕ್ಕಿವೆ. ಸಿಸಿಟಿವಿ ದೃಶ್ಯ ಸಿಕ್ಕಿದೆ. ಆ ಸಮಯದಲ್ಲಿ ಆ ಜಾಗದಲ್ಲಿ ೨೬ ಬಿಎಂಟಿಸಿ ಬಸ್ ಚಲಿಸಿದೆ. ಅದರಲ್ಲಿರುವ ಕ್ಯಾಮರಾಗಳ ಮೂಲಕವೂ ಮಾಹಿತಿ ಸಿಗುತ್ತದೆ ಎಂದಿದ್ದಾರೆ.
ಕೆಫೆಯವರ ಮೇಲಿನ ದ್ವೇಷದಿಂದ ಸ್ಫೋಟ ಮಾಡಲಾಗಿದೆ ಎನ್ನುವ ಶಂಕೆಯು ಇದೆ. ತಪ್ಪಿತಸ್ಥರು ಯಾರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ವಿರೋಧ ಪಕ್ಷದವರಿಗೂ ಹೇಳಿದ್ದೇನೆ, ಬೇರೆ ಸಮಯದಲ್ಲಿ ರಾಜಕಾರಣ ಮಾಡಿ, ಈಗ ಬೇಡ ಅಂತ. ಇದು ಬೆಂಗಳೂರಿನ ಪ್ರತಿಷ್ಠೆ ಮತ್ತು ಸುರಕ್ಷತೆಯ ಪ್ರಶ್ನೆ. ನಗರದಲ್ಲಿ ಸುಮಾರು ೭೫೦೦ ಕ್ಯಾಮೆರಾಗಳನ್ನು ಹಾಕಲಾಗಿದೆ. ಎಒನ್ ಕೂಡ ಬಳಸಲಾಗುತ್ತಿದೆ ಎಂದು ಹೇಳಿದರು.