ಬಾಂಬ್ ಬೆದರಿಕೆ ಕಳವಳಕಾರಿ

ಬೆಂಗಳೂರು, ಡಿ. ೧- ಶಾಲೆಗಳಿಗೆ ಅನಾಮಧೇಯ ವ್ಯಕ್ತಿಗಳು ಬಾಂಬ್ ಬೆದರಿಕೆಯೊಡ್ಡಿರುವುದು ಕಳವಳಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಬಾಂಬ್ ಬೆದರಿಕೆಯಿಂದ ಮಕ್ಕಳು, ಪೋಷಕರು ತೀವ್ರವಾಗಿ ಕಳವಳಗೊಂಡಿದ್ದು, ಅವರಲ್ಲಿ ಭೀತಿ ಸೃಷ್ಠಿಸಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದಲೇ ದುಷ್ಟಶಕ್ತಿಗಳು ಇಂತಹ ಹುನ್ನಾರ ನಡೆಸಿರಬಹುದು ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಪೋಷಕರು, ಮಕ್ಕಳನ್ನು ಧೈರ್ಯವಾಗಿ ಶಾಲೆಗೆ ಕಳುಹಿಸುವಂತಹ ಸುರಕ್ಷತೆ, ಭದ್ರತೆಯ ಖಾತರಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಬಾಂಬ್ ಬೆದರಿಕೆಯ ಬಗ್ಗೆ ಅಮೂಲಾಗ್ರ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ, ಮೂಲ ಯಾವುದು ಎಂಬುದನ್ನು ಪತ್ತೆಹಚ್ಚಿ, ದುಷ್ಟರ ಹೆಡೆಮುರಿ ಕಟ್ಟಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ನೆರವು ಪಡೆಯುವ ಬಗ್ಗೆಯೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸಬಾರದು ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.