ಬಾಂಬ್‌ದಾಳಿ ರೂವಾರಿ ಕೆನಡಾದಲ್ಲಿ ಹತ್ಯೆ

ಒಟ್ಟಾವ, ಜು.೧೫-೧೯೮೫ರಲ್ಲಿ ಏರ್ ಇಂಡಿಯಾ ಬಾಂಬ್ ದಾಳಿ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ವ್ಯಕ್ತಿ ಕೆನಡಾದಲ್ಲಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

ಬರೋಬ್ಬರಿ ೩೨೯ ಜನರ ಸಾವಿಗೆ ಕಾರಣವಾಗಿದ್ದ ರಿಪುದಮನ್ ಸಿಂಗ್ ಮಲಿಕ್ ಹತ್ಯೆಯಾಗಿದ್ದು, ನಿನ್ನೆ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿರುವ ವ್ಯಾಂಕೊವರ್ ನಗರದಲ್ಲಿರುವ ಆತನ ಬಟ್ಟೆ ಅಂಗಡಿ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಆದರೆ, ದಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಮೃತ ವ್ಯಕ್ತಿಯ ಹೆಸರನ್ನು ಖಚಿತಪಡಿಸಿಲ್ಲ. ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದು ಉದ್ದೇಶಿತ ಗುಂಡಿನ ದಾಳಿ ಎನ್ನುವಂತೆ ತೋರುತ್ತಿದೆ ಎಂದು ಪೊಲೀಸ್ ಸಿಬ್ಬಂದಿ ಸರಬ್‌ಜಿತ್ ಸಂಘ ಹೇಳಿದ್ದು, ದಾಳಿಕೋರರು ಬಳಸಿದ್ದರು ಎನ್ನಲಾಗಿರುವ ವಾಹನವು ಕೆಲವು ಕಿ.ಮೀ ದೂರದಲ್ಲಿ ಸುಟ್ಟು ಭಸ್ಮವಾಗಿದೆ. ಆರೋಪಿಗಳು ಮತ್ತೊಂದು ವಾಹನದಲ್ಲಿ ಪರಾರಿಯಾಗಿದ್ದಾರೆ. ಅದಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದಾರೆ.

ಏನಿದು ಪ್ರಕರಣ?: ಐರ್ಲೆಂಡ್ ಕರಾವಳಿ ಪ್ರದೇಶದಲ್ಲಿ ’ಏರ್ ಇಂಡಿಯಾ ವಿಮಾನ ೧೮೨ ಮೇಲೆ ನಡೆದ ದಾಳಿ ವೇಳೆ, ೨೨ ಸಿಬ್ಬಂದಿಯೂ ಸೇರಿದಂತೆ ಒಟ್ಟು ೩೨೯ ಮಂದಿ ಮೃತಪಟ್ಟಿದ್ದರು. ಜಪಾನ್‌ನ ನರಿಟ ವಿಮಾನ ನಿಲ್ದಾಣದಲ್ಲಿಯೂ ಮತ್ತೊಂದು ಬಾಂಬ್ ಸ್ಫೋಟಗೊಂಡು ವಿಮಾನಕ್ಕೆ ಸರಕು ತುಂಬಿಸುತ್ತಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಈ ಎರಡೂ ಸ್ಫೋಟಕ್ಕೆ ಬಳಿಸಿದ್ದ ಬಾಂಬ್ ಸ್ಯೂಟ್‌ಕೇಸ್, ಸಿಖ್ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ವ್ಯಾಂಕೋವರ್‌ನಲ್ಲಿ ಪತ್ತೆಯಾಗಿತ್ತು.

ಬಾಂಬ್ ತಯಾರಿಕೆ ಮತ್ತು ಇತರ ಸಹಚರರ ಕುರಿತು ಸುಳ್ಳು ಮಾಹಿತಿ ನೀಡಿದ್ದ ಇಂದರ್ಜಿತ್ ಸಿಂಗ್ ರೆಯಾತ್, ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಏಕೈಕ ವ್ಯಕ್ತಿಯಾಗಿದ್ದಾನೆ. ಮಲಿಕ್ ಹಾಗೂ ಮತ್ತೊಬ್ಬ ಶಂಕಿತ ಅಜೈಬ್ ಸಿಂಗ್ ಬಗ್ರಿ ೨೦೦೫ರಲ್ಲಿ ಪ್ರಕರಣದಿಂದ ಖುಲಾಸೆಗೊಂಡಿದ್ದರು.

ಎರಡು ದಶಕಗಳ ಕಾಲ ಸೆರೆವಾಸದಲ್ಲಿದ್ದ ರೆಯಾತ್‌ಗೆ ೨೦೧೬ರಲ್ಲಿ ಪೆರೋಲ್ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.