
ಲಕ್ಷ್ಮೇಶ್ವರ,ಮೇ.20: ತಾಲೂಕಿನಾದ್ಯಂತ ನಿರ್ಮಿಸಿರುವ ಬಾಂಧಾರಗಳಲ್ಲಿ ಮಿತಿಮೀರಿದ ಆಪು ಬೆಳೆದು ನಿಂತಿದ್ದು ಬರುವ ಮಳೆಗಾಲದಲ್ಲಿ ದೊಡ್ಡ ತೊಂದರೆಯನ್ನು ಬಾಂಧಾರಗಳು ಸೃಷ್ಟಿಸಲಿವೆ.
ಸಣ್ಣ ನೀರಾವರಿ ಇಲಾಖೆಯಿಂದ 2015-16 ರಿಂದ ನಿರ್ಮಿಸಿರುವ ಸರಣಿ ಬಾಂಧಾರಗಳು ಸೇರಿದಂತೆ ಈಗಾಗಲೇ ನಿರ್ಮಿಸಿರುವ ಎಲ್ಲ ಬಾಂಧಾರಗಳಲ್ಲೂ ಆಳೆತ್ತರದ ಆಪು ಬೆಳೆದು ನಿಂತಿದ್ದರೂ ಸಹ ಇಲಾಖೆಯು ಕೈ ಚೆಲ್ಲಿಕೊಂಡು ಕುಳಿತಿದ್ದು ಅನುದಾನ ಇಲ್ಲ ಎಂಬ ಉತ್ತರ ಇಲಾಖೆಯಿಂದ ಬರುತ್ತಿದೆ.
ಇತ್ತ ಜಿಲ್ಲಾ ಪಂಚಾಯಿತಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಸಹ ಗ್ರಾಮ ಪಂಚಾಯಿತಿಗಳಿಗೆ ಕ್ರಿಯಾಯೋಜನೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಂಧರಗಳಲ್ಲಿನ ಆಪು ತೆಗೆಯಲು ಯಾವುದೇ ಅವಕಾಶ ಕಲ್ಪಿಸದಿರುವುದರಿಂದ ಗ್ರಾಮ ಪಂಚಾಯಿತಿಯವರು ಸಹ ಕೈ ಚೆಲ್ಲಿ ಕುಳಿತುಕೊಂಡಿದ್ದಾರೆ.
ಆದರೆ ಯಾವ ಉದ್ದೇಶಕ್ಕಾಗಿ ನೀರಾವರಿ ಇಲಾಖೆಯವರು ಬಾಂದಾರಗಳನ್ನು ನಿರ್ಮಿಸಿದ್ದರು ಆ ಉದ್ದೇಶಕ್ಕೆ ಬೆಳೆದು ನಿಂತ ಆಪು ಅಡ್ಡಿ ಉಂಟು ಮಾಡಿದೆ. ಮಳೆಗಾಲದಲ್ಲಿ ಹಳ್ಳಗಳಲ್ಲಿ ಏಕಾಏಕಿ ಪ್ರವಾಹ ಉಂಟಾದಾಗ ಹಳ್ಳದ ನೀರು ತಡೆಹಿಡಿದು ಬೇರೆ ಬೇರೆ ಕಡೆ ನುಗ್ಗುವುದರಿಂದ ರೈತರ ಜಮೀನುಗಳು ಕೂಡ ಹಾನಿಯಾಗತೊಡಗಿವೆ.
ಬಟ್ಟೂರು ಸಮೀಪದ ದೊಡ್ಡ ಹಳ್ಳದಲ್ಲಿ ಅಪಾರ ಪ್ರಮಾಣದ ಆಪು ಬೆಳೆದು ನಿಂತಿದೆ ಈ ಆಪು ರೈತರಿಗೆ ತಲೆ ನೋವಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ಗೌಡ ಪಾಟೀಲ್ ಅವರನ್ನು ಸಂಪರ್ಕಿಸಿದಾಗ ಎಂ ಎನ್ ಆರ್ ಇ ಜಿ ಯೋಜನೆಯಡಿ ಅವಕಾಶ ಕಲ್ಪಿಸಿದರೆ ಆಪು ತೆಗೆದು ಹಳ್ಳವನ್ನು ಸ್ವಚ್ಛ ಮಾಡಬಹುದಾಗಿದೆ ಎಂದರು.