ಬಾಂಗ್ಲಾ: 7 ದಿನ ಲಾಕ್‌ಡೌನ್

ಢಾಕಾ,ಏ.೩- ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ೨ನೇ ಅಲೆ ಆರ್ಭಟ ಹೆಚ್ಚಾಗುತ್ತಿದ್ದು, ನೆರೆಯ ಬಾಂಗ್ಲಾ ದೇಶದಲ್ಲೂ ಕೊರೊನಾ ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಸೋಂಕು ತಡೆಯಲು ಬಾಂಗ್ಲಾ ದೇಶದಲ್ಲಿ ೭ ದಿನಗಳ ಲಾಕ್‌ಡೌನ್‌ನನ್ನು ಜಾರಿ ಮಾಡಲು ತೀರ್ಮಾನಿಸಲಾಗಿದೆ.
ಏ. ೫ ಸೋಮವಾರದಿಂದ ಅನ್ವಯವಾಗುವಂತೆ ೭ ದಿನಗಳ ಕಾಲ ಬಾಂಗ್ಲಾ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡುವ ತೀರ್ಮಾನವನ್ನು ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಪ್ರಕಟಿಸಿದ್ದಾರೆ.
ಬಾಂಗ್ಲಾದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಸೋಂಕು ತಡೆಗೆ ಲಾಕ್‌ಡೌನ್ ಅನಿವಾರ್ಯ. ಹಾಗಾಗಿ, ಏ ೫ ಸೋಮವಾರದಿಂದ ಜಾರಿಗೆ ಬರುವಂತೆ ದೇಶಾದ್ಯಂತ ೭ ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ ಎಂದು ಅವರು ಹೇಳಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲ ವಾಣಿಜ್ಯ ಚಟುವಟಿಕೆಗಳು ರೈಲು, ಬಸ್ ಸಂಚಾರ ಬಂದ್ ಆಗಲಿದ್ದು, ಶಾಲಾ-ಕಾಲೇಜುಗಳು ಮುಚ್ಚಲಿವೆ. ಇಡೀ ದೇಶ ಅಘೋಷಿತ ಬಂದ್‌ಗೆ ಒಳಪಡಲಿದೆ.
ಬಾಂಗ್ಲಾದೇಶದಲ್ಲಿ ಕೊರೊನಾ ೨ನೇ ಅಲೆಯ ಅಬ್ಬರ ಹೆಚ್ಚಾಗಿದ್ದು, ಸೋಂಕು ತಡೆಗೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಲು ಲಾಕ್‌ಡೌನ್ ಅನಿವಾರ್ಯ ಎಂಬುದನ್ನು ಜನರಿಗೆ ಮನದಟ್ಟು ಮಾಡಿ ಲಾಕ್‌ಡೌನ್ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಾಂಗ್ಲಾ ಪ್ರಧಾನಿ ತಿಳಿಸಿದ್ದಾರೆ.