ಬಾಂಗ್ಲಾ, ಮ್ಯಾನ್ಮಾರ್‌ಗೆ ಅಪ್ಪಳಿಸಿದ ಮೋಚಾ

ಢಾಕಾ, ಮೇ ೧೫- ತೀವ್ರ ಗಾಳಿಯೊಂದಿಗೆ ಪ್ರಬಲ ಚಂಡಮಾರುತ ಮೋಚಾ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈತನಕ ಮ್ಯಾನ್ಮಾರ್‌ನಲ್ಲಿ ಆರು ಮಂದಿ ಮೃತಪಟ್ಟಿದ್ದು, ಬಾಂಗ್ಲಾದೇಶದಲ್ಲಿ ಸಾವು-ನೋವಿನ ಯಾವುದೇ ವರದಿಯಾಗಿಲ್ಲ.
ಮೋಚಾ ಅಪ್ಪಳಿಸುವ ಮುನ್ನವೇ ಮುಂಜಾಗ್ರತಾ ಕ್ರಮಾವಾಗಿ ಈಗಾಗಲೇ ೭.೫೦ ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಹೆಚ್ಚಿನ ನಾಗರಿಕರಿಗೆ ಸನಿಹದ ಶಾಲೆಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ವಿಶ್ವದ ಅತೀ ದೊಡ್ಡ ನಿರಾಶ್ರಿತರ ಶಿಬಿರವೆಂದೇ ಕರೆಯಲ್ಪಡುವ ಬಾಂಗ್ಲಾದೇಶದ ಕಾಕ್ಸ್ ಬಝಾರ್‌ಗೆ ಮೋಚಾ ಅಪ್ಪಳಿಸಿದ್ದು, ಈಗಾಗಲೇ ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ. ಮೋಚಾ ಚಂಡಮಾರುತವು ನಿರಾಶ್ರಿತರ ಶಿಬರದ ಮೇಲೆ ಭಾರೀ ಹಾನಿ ಮಾಡಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ ಅದೃಷ್ಟವಶಾತ್ ಅಂದುಕೊಡಂತ ರೀತಿಯಲ್ಲಿ ಹಾನಿ ಮಾಡಿಲ್ಲ ಎನ್ನಲಾಗಿದೆ. ಚಂಡಮಾರುತ ಪರಿಣಾಮ ಮ್ಯಾನ್ಮಾರ್‌ನ ಪಶ್ಚಿಮ ರಾಖೈನ್ ರಾಜ್ಯದಲ್ಲಿ ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದೆ. ಅಲ್ಲದೆ ಇಲ್ಲಿನ ರೊಹಿಂಗ್ಯಾ ನಿರಾಶ್ರಿತರ ಶಿಬಿರಗಳ ಮೇಲೆ ಕೂಡ ಹಾನಿ ಉಂಟಾಗಿದೆ. ರಾಜ್ಯದಲ್ಲಿ ಮರ ಬಿದ್ದು ೧೪ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ದೇಶಾದ್ಯಂತ ಹಾನಿಗೊಳಗಾದ ಮತ್ತು ಕುಸಿದ ಕಟ್ಟಡಗಳ ಬಗ್ಗೆ ವರದಿ ಮಾಡಲಾಗಿದೆ. ರಾಜ್ಯದ ರಾಜಧಾನಿ ಸಿಟ್ವೆಯಾದ್ಯಂತ ವಿದ್ಯುತ್ ಮತ್ತು ವೈರ್‌ಲೆಸ್ ಸಂಪರ್ಕಗಳು ಅಸ್ತವ್ಯಸ್ತಗೊಂಡಿವೆ ಮತ್ತು ಚಂಡಮಾರುತವು ಸಮೀಪಿಸುತ್ತಿರುವಾಗ ಬಲವಾದ ಗಾಳಿಯಿಂದ ಟೆಲಿಕಾಂ ಟವರ್ ಕುಸಿದಿದೆ. ೩ ಲಕ್ಷ ಜನಸಂಖ್ಯೆಯಿರುವ ಸಿಟ್ವೆ ನಗರದಲ್ಲಿನ ೪ ಸಾವಿರಕ್ಕೂ ಅಧಿಕ ಜನರನ್ನು ಶುಕ್ರವಾರದಿಂದ ಇತರ ನಗರಗಳಿಗೆ ಸ್ಥಳಾಂತರಿಸಲಾಗಿದ್ದರೆ, ೨೦,೦೦೦ಕ್ಕೂ ಅಧಿಕ ಜನರು ಎತ್ತರದ ಸ್ಥಳದಲ್ಲಿರುವ ಮಠ, ಮಂದಿರ ಮತ್ತು ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಚಂಡಮಾರುತ ಅಪ್ಪಳಿಸುವ ಮೊದಲೇ ನಗರದಲ್ಲಿ ಗಂಟೆಗೆ ೪೮ ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಗಾಳಿಯ ವೇಗ ಹೆಚ್ಚುತ್ತಿರುವುದರಿಂದ ಭೀತಿಗೊಂಡಿರುವ ಜನತೆ ತಾತ್ಕಾಲಿಕ ಶಿಬಿರದತ್ತ ಮುನ್ನುಗ್ಗುತ್ತಿರುವುದರಿಂದ ಶಿಬಿರಗಳಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ. ಈ ವಲಯದಲ್ಲಿ ಕಳೆದೊಂದು ದಶಕದಲ್ಲಿ ಬೀಸಿದ ಅತ್ಯಂತ ಪ್ರಬಲ ಚಂಡಮಾರುತ ಎಂದೆನಿಸಿರುವ ಮೋಚ ಚಂಡಮಾರುತ ರವಿವಾರ ಬೆಳಿಗ್ಗೆ ಬಾಂಗ್ಲಾದ ಕೋಕ್ಸ್ ಬಝಾರ್ಗೆ ಅಪ್ಪಳಿಸಿದೆ. ಇಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಟೆಂಟ್ಗಳಲ್ಲಿ ಸುಮಾರು ೧ ದಶಲಕ್ಷದಷ್ಟು ರೊಹಿಂಗ್ಯಾಗಳು ನೆಲೆಸಿದ್ದು ಅವರನ್ನು ಟ್ರಕ್ ಮತ್ತಿತರ ವಾಹನಗಳ ಮೂಲಕ ಸಮುದಾಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು ೧.೨೭ ದಶಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಚಂಡಮಾರುತ ಹಾದುಹೋಗುವ ಪ್ರದೇಶದಲ್ಲಿರುವ ಜನಪ್ರಿಯ ಪ್ರವಾಸೀತಾಣ ಸೈಂಟ್ ಮಾರ್ಟಿನ್ಸ್ ದ್ವೀಪದ ನಿವಾಸಿಗಳಿಗೂ ಅಪಾಯದ ಮುನ್ನೆಚ್ಚರಿಕೆ ರವಾನಿಸಲಾಗಿದೆ ಎಂದು ಬಾಂಗ್ಲಾದೇಶದ ಉಪ ನಿರಾಶ್ರಿತರ ಆಯುಕ್ತ ಶಂಸುದ್ ದೌಝ ಹೇಳಿದ್ದಾರೆ. ಬಾಂಗ್ಲಾದ ಅತೀದೊಡ್ಡ ಬಂದರುನಗರ ಚಿತ್ತಗಾಂಗ್‌ನಲ್ಲಿ ಎಲ್ಲಾ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಮ್ಯಾನ್ಮಾರ್ನ ಸಾವಿರಾರು ಜನರ ಮೇಲೆ ಪರಿಣಾಮ ಬೀರಿದ್ದು ಮ್ಯಾನ್ಮಾರ್ನ ರಾಖಿನೆ ರಾಜ್ಯದಲ್ಲಿ ೬ ದಶಲಕ್ಷ ಜನತೆ ಮಾನವೀಯ ನೆರವಿನ ಅಗತ್ಯದಲ್ಲಿದ್ದಾರೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ. ಚಂಡಮಾರುತದಿಂದಾಗಿ ಛಟ್ಟೋಗ್ರಾಮ್, ಕಾಕ್ಸ್ ಬಝಾರ್, ರಂಗಮಟ್ಟಿ, ಬಂದಾರ್ಬನ್ ಮತ್ತು ಖಗ್ರಚ್ಛಾರಿ ಜಿಲ್ಲೆಗಳಲ್ಲಿ ಭಾರೀ ಭೂಕುಸಿತ ಸಂಭವಿಸಲಿದೆ ಎಂದು ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.