ಬಹುಸಂಸ್ಕೃತಿ ಬಿಂಬಿಸುವ ಶರಣರ ವಚನಗಳು: ಡಾ.ಭೀಮಾಶಂಕರ ಬಿರಾದಾರ

ಬೀದರ್:ಎ.2: ಶರಣರ ವಚನಗಳಲ್ಲಿ ಬಹು ಸಂಸ್ಕೃತಿ ಬಿಂಬಿತವಾಗಿದೆ. ವೈಚಾರಿಕತೆ ಹಾಗೂ ಬಹುಮುಖಿ ಚಿಂತನೆಗಳು ಅಡಕವಾಗಿವೆ’ ಎಂದು ಅಕ್ಕ ಮಹಾದೇವಿ ಕಾಲೇಜಿನ ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ ಅಭಿಪ್ರಾಯಪಟ್ಟರು.

ಬಸವಕಲ್ಯಾಣ ನಗರದ ಎಸ್.ಎಸ್.ಕೆ.ಬಸವೇಶ್ವರ ಕಾಲೇಜಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಗಳಂಗಳಪ್ಪ ಪಾಟೀಲ ಬಸವಾದಿ ಶರಣ ಸಾಹಿತ್ಯ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ನಡೆದ ವಚನಗಳ ಸಾಂಸ್ಕೃತಿಕ ಆಯಾಮ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದ ಶರಣರು ಮಹಿಳೆ ಮತ್ತು ಶ್ರಮಿಕ ವರ್ಗದ ಸಂಸ್ಕೃತಿಯನ್ನು ತಾತ್ವಿಕ ಮತ್ತು ಬೌದ್ಧಿಕ ನೆಲೆಯಲ್ಲಿ ವಿನ್ಯಾಸಗೊಳಿಸಿದರು. ಬಸವಣ್ಣನವರ ಸಮಾಜವಾದ, ಅಲ್ಲಮಪ್ರಭುಗಳ ಬಯಲ ಸಿದ್ಧಾಂತ, ಅಕ್ಕ ಮಹಾದೇವಿಯ ಶೋಧಗುಣ ಭಾರತೀಯ ದಾರ್ಶನಿಕ ಪರಂಪರೆಯ ಬೆಳಕಿನ ಬೀಜಗಳಾಗಿವೆ’ ಎಂದರು.

ಪ್ರಾಂಶುಪಾಲ ಡಾ.ಬಸವರಾಜ ಎವಲೆ ಮಾತನಾಡಿ,’ಈ ನೆಲದಿಂದಲೇ ವಿಶ್ವಕ್ಕೆ ವಚನ ಸಾಹಿತ್ಯ ನೀಡಲಾಗಿದೆ. ಆದ್ದರಿಂದ ಈ ಭೂಮಿ ಪವಿತ್ರ ಮತ್ತು ಶ್ರೇಷ್ಠ ಸ್ಥಳವಾಗಿದೆ. ಶರಣರಿಂದ ರಚನೆಯಾದ ವಚನಗಳು ಜಾತಿ, ಪಂಥ, ವರ್ಗವನ್ನು ವಿರೋಧಿಸುವ ನೆಲೆಯಲ್ಲಿ ನಿಲ್ಲುತ್ತವೆ’ ಎಂದರು.

ಡಾ.ಎಸ್.ಎಂ.ಹನಗೋಡಿ ಮಠ ಮಾತನಾಡಿದರು. ಪ್ರೊ.ಆರ್.ಡಿ.ಬಾಲಿಕಿಲೆ, ಪ್ರೊ.ಲಕ್ಷ್ಮಿಬಾಯಿ ಭಂಕೂರ, ಸೂರ್ಯಕಾಂತ ನಾಸೆ, ನವೀನ ಇದ್ದರು. ಪ್ರೊ.ವಿಠೋಬಾ ಡೊಣ್ಣೆಗೌಡರ್ ಸ್ವಾಗತಿಸಿದರು. ಅಂಬ ರೀಶ ನಿರೂಪಿಸಿದರು. ಡಾ.ಶಿವಕು ಮಾರ ವಂದಿಸಿದರು.