ಬಹುಸಂಖ್ಯಾತರೆಲ್ಲಾ ಒಂದಾದರೆ ಮೇಲ್ಜಾತಿಯಲ್ಲಿನ ಅಧಿಕಾರ ನಮಗೂ ಸಿಗುತ್ತೆ: ಮುನಿಯಪ್ಪ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ನ 14 : ನಗರದ ಸಂಗನಕಲ್ಲು ರಸ್ತೆಯ ಕೆ.ಇ.ಬಿ ಫಂಕ್ಷನ್ ಹಾಲ್ ನಲ್ಲಿ ಇಂದು ಬಹುಜನ ಸಮಾಜ‌ ಪಕ್ಷದ ಬಳ್ಳಾರಿ‌ಜಿಲ್ಲಾ ಘಟಕದ ಪುನರ್ ರಚನಾ  ಕಾರ್ಯಕ್ರಮ ನಡೆಯಿತು.
ಪಕ್ಷದ ರಾಜ್ಯ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ,
ದೇಶದಲ್ಲಿ 130 ಕೋಟಿ ಜನರಲ್ಲಿ ನಾಲ್ಕು ಕೋಟಿ ಬ್ರಾಹ್ಮಣರಿದ್ದಾರೆ. 30 ಕೋಟಿ ಎಸ್ಸಿ ಎಸ್ಟಿ ಜನ ಇದ್ದಾರೆ. ಆದರೆ ಅಧಿಕಾರ ಮಾತ್ರ ಕೇವಲ ನಾಲ್ಕು ಕೋಟಿ ಇರುವ ಮೇಲ್ಜಾತಿಯ  ಜನರಲ್ಲಿ ಕೇಂದ್ರಿಕೃತವಾಗಿದೆ.
ಅಂಬೇಡ್ಕರ್ ಅವರು ಕೆಳವರ್ಗದವರಿಗೂ ಸಮಾನತೆ ಕಲ್ಪಿಸಲು ಸಂವಿಧಾನ ರಚನೆ ಮೂಲಕ ಹಕ್ಕುಗಳನ್ನು‌ ನೀಡಿದ್ದರೂ ನಾವು ಉನ್ನತ ಹಂತದ ಅಧಿಕಾರ ಹೊಂದಲು ಆಗುತ್ತಿಲ್ಲ. ಈಗಲೂ ಶ್ರೀಮಂತರು ಶ್ರೀಮಂತರೇ ಆಗುತ್ತಿದ್ದಾರೆ, ಬಡವರು ಬಡವರಾಗಿಯೇ ಇದ್ದಾರೆ.
ಅದಕ್ಕಾಗಿ ಬಹುಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ, ಹಿಂದುಳಿದ ಜನರೆಲ್ಲ ಒಂದಾಗಿ ಅಧಿಕಾರ ಹೊಂದಬೇಕು ಎಂಬ ಪರಿಕಲ್ಪನೆಯಲ್ಲೇ ಹುಟ್ಟಿದ್ದು ಬಿಎಸ್ಪಿ ಪಕ್ಷ ಎಂದರು.
ಈ‌ಪಕ್ಷದಿಂದಲೇ ದೇಶದ ಬೃಹತ್ ರಾಜ್ಯ ಉತ್ತರ ಪ್ರದೇಶದಲ್ಲಿ ಮಾಯಾವತಿ ಸಿಎಂ ಆಗಲು ಸಾಧ್ಯವಾಯ್ತು. ಅಲ್ಲಿ ಮಾಯಾವತಿಯವರಿಂದ ಕೆಳವರ್ಗದ ಜನತೆ ದಶಕಗಳ‌ ಕಾಲದಿಂದ ದೊರೆಯದೇ ಇದ್ದ ಸೂರನ್ನು ಕಂಡರು, ಶೇ 30 ರಷ್ಟು ಮೀಸಲಾತಿ ಪಡೆದರು. ಅದಕ್ಕಾಗಿ ರಾಜ್ಯದಲ್ಲಿಯೂ ಬಹುಸಂಖ್ಯಾತ ಸಮುದಾಯ ಒಂದಾಗಿ ಚುನಾವಣೆಗಳನ್ನು‌ ಎದುರಿಸಿ ಅಧಿಕಾರ ಪಡೆಯವಂತಾಗಬೇಕು ಎಂದರು.
ರಾಜ್ಯ ಉಸ್ತುವಾರಿ ಎಂ.ಗೋಪಿನಾಥ್, ಕಾರ್ಯದರ್ಶಿ ಆರ್ ಮುನಿಯಪ್ಪ, ಉಪಾಧ್ಯಕ್ಷ ವಾಸು
ಮುನಿಸ್ವಾಮಿ, ಲಕ್ಷ್ಮಣ, ಚಿದಂಬರ್, ರಾಮಸ್ವಾಮಿ, ಮಲ್ಲಯ್ಯ, ಭಾಷಾ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ತಾಯಿ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು.