ಬಹುಮುಖ ವ್ಯಕ್ತಿತ್ವದ ಮೇರು ನಟ ಡಾ.ರಾಜಕುಮಾರ್

ಕಲಬುರಗಿ,ಏ.24: ನಾಡಿನ ಪ್ರಸಿದ್ಧ ವ್ಯಕ್ತಿಯಾಗಿ, ಮೇರು ನಟ, ಗಾಯಕ, ಕನ್ನಡಪರ ಚಳುವಳಿಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಐದು ದಶಕಗಳ ಕಾಲ ತಮ್ಮದೇ ಆದ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿ ಜನಮಾನಸದಲ್ಲಿ ‘ಅಣ್ಣಾವ್ರ’ ಸ್ಥಾನವನ್ನು ಪಡೆದ ‘ಬಂಗಾರದ ಮನುಷ್ಯ’ ಡಾ.ರಾಜಕುಮಾರ ಅವರದು ಬಹುಮುಖ ವ್ಯಕ್ತಿತ್ವವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ವಿದ್ಯಾಸಿರಿ ಟ್ಯುಟೋರಿಯಲ್ಸ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ನಟಸಾರ್ವಭೌಮ ಡಾ.ರಾಜಕುಮಾರ್ ಅವರ 95ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಡಾ.ರಾಜಕುಮಾರ ಅವರು ಹೃದಯ ಶ್ರೀಮಂತರಾಗಿದ್ದರು. ಬಡವರಪರ, ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಅವರಲ್ಲಿರುವ ಕಾಳಜಿ ಅತ್ಯಂತ ಶ್ಲಾಘನೀಯವಾಗಿದೆ. ನಟ ಸಾರ್ವಭೌಮರಾಗಿ, ಗೌರವ ಡಾಕ್ಟರೇಟ್, ಕರ್ನಾಟಕ ರತ್ನ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವದು ನಮ್ಮ ನಾಡಿಗೆ ಸಂದ ಗೌರವವಾಗಿದೆ ಎಂದರು.
ಶಿವಯೋಗಪ್ಪ ಬಿರಾದಾರ, ಸತೀಶ್ ಹತ್ತಿ, ದೇವೇಂದ್ರಪ್ಪ, ಬಸಯ್ಯಸ್ವಾಮಿ ಹೊದಲೂರ, ರೇವಣಸಿದ್ದಪ್ಪ ಸೇರಿದಂತೆ ಇತರರು ಇದ್ದರು.