ಬಹುಮುಖ ಪ್ರತಿಭೆಯ ಮೇರು ವಿಜ್ಞಾನಿ ಸರ್ ಜಗದೀಶ್ಚಂದ್ರ ಭೋಸ್

ಕಲಬುರಗಿ,ನ.24: ರೇಡಿಯೊ, ದೂರಸಂಪರ್ಕ ಕ್ಷೇತ್ರದಲ್ಲಿ ಸಂಶೋಧನೆಯ ಮೂಲಕ ಭೌತಶಾಸ್ತ್ರ, ಪ್ರಕಾಶಶಾಸ್ತ್ರ, ಸಸ್ಯಗಳಿಗೂ ಜೀವವಿದ್ದು, ಅವುಗಳು ಮಾನವರಂತೆ ಉಸಿರಾಡಿಸುತ್ತವೆ, ಆಹಾರ ಮತ್ತು ನೀರು ಸೇವಿಸುತ್ತವೆ ಎಂಬ ಅದ್ಭುತವಾದ ಪರಿಕಲ್ಪನೆಯನ್ನು ನೀಡುವ ಮೂಲಕ ಸಸ್ಯ ಜೀವಶಾಸ್ತ್ರ ಕ್ಷೇತ್ರಕ್ಕೆ ಅಮೋಘವಾದ ಕೊಡುಗೆಯನ್ನು ಬಹುಮುಖ ಪ್ರತಿಭೆಯ ಮೇರು ವಿಜ್ಞಾನಿ ಸರ್ ಜಗದೀಶ್ಚಂದ್ರ ಬೋಸ್ ಅವರು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ರಾಮಮಂದಿರ ಸಮೀಪವಿರುವ ‘ಕೊಹಿನೂರ ಡಿಗ್ರಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಸರ್ ಜಗದೀಶ್ಚಂದ್ರ ಭೋಸ್ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಹಣಮಂತರಾಯ ಬಿ.ಕಂಟೆಗೋಳ್ ಮಾತನಾಡಿ, ಭೋಸ್ ಅವರು ವಿಶೇಷವಾಗಿ ಸಸ್ಯಶಾಸ್ತ್ರದ ಮೇಲೆ ಬೆಳಕು ಚೆಲ್ಲಿದ್ದಾರೆ. ಕ್ರೆಸ್ಕೊಗ್ರಾಫ್ ಮತ್ತು ಕೊಹೆರರ್ ಉಪಕರಣಗಳನ್ನು ಕಂಡುಹಿಡಿದಿದ್ದಾರೆ. ‘ಬೆಂಗಾಲಿ ವಿಜ್ಞಾನ ಸಾಹಿತ್ಯದ ಪಿತಾಮಹ’ ಎಂದು ಕರೆಯಲಾಗುತ್ತದೆ. ಅಮೇರಿಕಾದ ಪೇಟೆಂಟ್ ಪಡೆದ ಭಾರತ ಉಪಖಂಡದ ಮೊದಲಿಗರಾಗಿದ್ದಾರೆ. ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ವಿಜ್ಞಾನಿಗಳ ಬಗ್ಗೆ ಅರಿತುಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನೀಲಕಂಠಯ್ಯ ಹಿರೇಮಠ, ರಾಜಕುಮಾರ ಬಿರಾದಾರ, ಆಕಾಶ ಮೂಲಗೆ, ಜಗದೀಶ ಹಿರೇಮಠ, ಭೀಮಾಶಂಕರ ಜಮಾದಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.