ಬಹುಮನಿ ಕೋಟೆ ಅತಿಕ್ರಮಣ ತೆರವುಗೊಳಿಸದಿದ್ದರೆ ಕಾನೂನು ಹೋರಾಟ: ಅಂದೋಲಾ ಶ್ರೀಗಳ ಎಚ್ಚರಿಕೆ

ಕಲಬುರಗಿ.ಡಿ.23:ನಗರದ ಬಹುಮನಿ ಕೋಟೆಯಲ್ಲಿನ ಅತಿಕ್ರಮಣವನ್ನು ತೆರವುಗೊಳಿಸದೇ ಹೋದಲ್ಲಿ ಕಾನೂನು ಹೋರಾಟ ಆರಂಭಿಸುವುದಾಗಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ್ ಸ್ವಾಮೀಜಿ ಅವರು ಎಚ್ಚರಿಸಿದರು.
ನಗರದ ಶೆಟ್ಟಿ ಟಾಕೀಸ್ ಎದುರುಗಡೆ ನೂತನ ಶ್ರೀರಾಮ ಸೇನೆ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶವಿದ್ದರೂ ಸಹ ಅದನ್ನು ಪಾಲಿಸದೇ ಅತಿಕ್ರಮಣಕಾರರಿಗೆ ಸಂರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಳೆದ 2005ರಲ್ಲಿಯೇ ಅತಿಕ್ರಮಣವನ್ನು ತೆರವುಗೊಳಿಸಲು ನ್ಯಾಯಾಲಯ ಆದೇಶ ನೀಡಿದರೂ ಸಹ ಆ ಆದೇಶವನ್ನು ಮಹಾನಗರ ಪಾಲಿಕೆಯು ಪಾಲಿಸದೇ ಮುಚ್ಚಿಟ್ಟಿದೆ ಎಂದು ದೂರಿದ ಅವರು, ಕೂಡಲೇ ಕಾನೂನಿನ ಅಡಿಯಲ್ಲಿ ಅತಿಕ್ರಮಣ ತೆರವುಗೊಳಿಸಬೇಕು. ಇಲ್ಲದೇ ಹೋದಲ್ಲಿ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದರು.
ನಗರದ ಮಹಾವೀರ ನಗರದಲ್ಲಿನ ಗಣೇಶ್ ಮಂದಿರವನ್ನು ತೆರವುಗೊಳಿಸಿದ್ದು ನೋವು ತಂದಿದೆ. ಇದು ಹಿಂದೂಗಳ ಮೇಲಿನ ದಬ್ಬಾಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅದು ಬಿಜೆಪಿ ಸರ್ಕಾರದಲ್ಲಿ ಇಂತಹುದು ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತೆರವುಗೊಳಿಸಿದ ಸ್ಥಳದಲ್ಲಿಯೇ ಗಣೇಶ್ ದೇವಸ್ಥಾನವು ಪುನರ್ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಇಡೀ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಸಂಪೂರ್ಣ ನಿಯಂತ್ರಣಗೊಂಡಿವೆ ಎಂದು ಸಮಾಧಾನ ವ್ಯಕ್ತಪಡಿಸಿದರು.
ಶ್ರೀರಾಮಸೇನೆಯು ಹಿಂದೂಗಳ ರಕ್ಷಣೆಯೊಂದಿಗೆ ಅನ್ಯಾಯ ಹಾಗೂ ಅಕ್ರಮ ಮತ್ತು ಅವ್ಯವಹಾರಗಳನ್ನು ಖಂಡಿಸುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಚೌಕ್ ಪೊಲೀಸ್ ಠಾಣೆಯ ಪಿಐ ಎಸ್.ಆರ್. ನಾಯಕ್, ಕಾಳಗಿ ತಾಲ್ಲೂಕಿನ ಅಧ್ಯಕ್ಷ ಕಾಳಪ್ಪಾ, ಜೇವರ್ಗಿ ತಾಲ್ಲೂಕು ಅಧ್ಯಕ್ಷ ಈಶ್ವರ್ ಹಿಪ್ಪರಗಿ, ಸೇಡಂ ತಾಲ್ಲೂಕು ಅಧ್ಯಕ್ಷ ಮೌನೇಶ್ ಬಡಿಗೇರ್, ಜಿಲ್ಲಾಧ್ಯಕ್ಷ ಮಹೇಶ್ ಎಚ್. ಗೊಬ್ಬುರ್, ಸಚಿನ್ ಕುಮಸಿ, ಶಶಿಕಾಂತ್ ದೀಕ್ಷಿತ, ಮಲ್ಲು ಮೋಟಗಿ, ರಮೇಶ್ ದೇಸಾಯಿ, ಮಹೇಶ್ ವಾಡಿ, ವೀರೇಶ್, ಮಹೇಶ್ ಕೆಂಬಾವಿ, ಗುಂಡು ಪಾಟೀಲ್, ಪ್ರೇಮಸಿಂಗ್, ಸಚಿನ್ ಗೊಬ್ಬೂರ್, ಗುರುಶಾಂತ್ ಟೆಂಗಳಿ, ಸಂತೋಷ್, ಗುರುಶಾಂತ ಟೆಂಗಳಿ, ಸಿದ್ದಾಜಿ ಪಾಟೀಲ್, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಧ್ಯಕ್ಷ ಸಿದ್ರಾಮಯ್ಯ ಹಿರೇಮಠ, ನ್ಯಾಯವಾದಿ ಚಂದ್ರಕಾಂತ್ ಕಾಳಗಿ, ರಾಮಣ್ಣ ಬೆಣ್ಣೆಶಿರೂರ್, ಸಂತೋಷ್ ಬೆನಕನಳಿ, ಸೈನಿಕ್ ರಾಠೋಡ್, ಶಿವು ರಾಠೋಡ್, ಮಲ್ಲು ಔರಾದ್ ಹಾಗೂ ಸೇನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.