ಬಹುಪಯೋಗಿ ಬಿದಿರಿನಿಂದ ಆರ್ಥಿಕ ಸದೃಢತೆ

ಕಲಬುರಗಿ:ಸೆ.19: ಬಿದಿರು ಅರಣ್ಯ ಬೆಳೆಯಾಗಿದ್ದು, ಬುಟ್ಟಿ, ಪೀಠೋಪಕರಣಗಳ ತಯಾರಿಕೆ, ಕೃಷಿ ಉಪಕರಣಗಳ ತಯಾರಿಕೆ, ಮನೆ ನಿರ್ಮಾಣಕ್ಕೆ ಸಲಕರಣೆ, ಜೊತೆಗೆ ಭವಿಷ್ಯದಲ್ಲಿ ಇದನ್ನು ಆಹಾರ, ಟಿಂಬರ್, ಇಂಧನವಾಗಿ ಉಪಯೋಗವಾಗಲಿದ್ದು, ಇದನ್ನು ‘ಹಸಿರು ಬಂಗಾರ’ ಎಂದು ಕರೆಯಲಾಗುತ್ತದೆ. ಬಹೂಪಯೋಗಿಯಾದ ಬಿದರಿನಿಂದ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದ್ದು, ರೈತರು ಇದರ ಬಗ್ಗೆ ಚಿತ್ತ ಹರಿಸುವುದು ಉತ್ತಮವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಬಿದಿರು ಬಳೆ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಬಿದಿರು ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಕಲ್ಲಿದ್ದಿಲನ ಕೊರತೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬಿದಿರನ್ನು ಪರ್ಯಾಯ ಇಂಧನವನ್ನಾಗಿ ಬಳಸಬಹುದಾಗಿದೆ. ಬಿದಿರಿನ ಎಲೆಗಳು ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಿವೆ. ಅರಣ್ಯ ವೃದ್ಧಿಯಾಗುತ್ತದೆ. ಉಷ್ಣಾಂಶ ನಿಯಂತ್ರಿಸುತ್ತದೆ. ಬಿದಿರು ಸಸಿಗಳನ್ನು ನೆಟ್ಟು, ಪೋಷಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅವರು ಬಿದಿರಿನ ಮಹತ್ವವನ್ನು ಸಾರುವ ಗೀತೆಯನ್ನು ಹಾಡಿದರು. ಮಹಾದೇವಪ್ಪ ಬಿರಾದಾರ, ಅಮರನಾಥ ಶಿವಮೂರ್ತಿ, ರಾಜಕುಮಾರ ದಮಡೆ, ಅಣವೀರ ಸೋಮಾ, ಕಾಶಿನಾಥ ಸಿಂಪಿ, ಸಿದ್ದಲಿಂಗ ಹೂಗಾರ ಸೇರಿದಂತೆ ಮತ್ತಿತರರಿದ್ದರು.