ಬಹುದಿನಗಳ ರೈಲ್ವೆ ಬೇಡಿಕೆ ಈಡೇರಿಸಲು ಆಗ್ರಹ- ಮನವಿ ಸಲ್ಲಿಕೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ7: ವಿಜಯನಗರ ಜಿಲ್ಲೆಯ ರೈಲ್ವೆ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಒತ್ತಾಯಿಸಿ, ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಪದಾಧಿಕಾರಿಗಳು, ನೈಋತ್ಯ ರೈಲ್ವೇ ವಲಯದ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಳಕೇಡ ಅವರಿಗೆ ಸೋಮವಾರ ಸಂಜೆ ಮನವಿ ಸಲ್ಲಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಸಂಚಾರಕ್ಕೆ ಮುಕ್ತವಾದ ಹೊಸಪೇಟೆ -ಕೊಟ್ಟೂರು- ದಾವಣಗೆರೆ ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರವಿಲ್ಲದೆ, ಜನರು ಪರದಾಡುತ್ತಿದ್ದಾರೆ ಅದನ್ನು ಪುನರ್ ಆರಂಭಿಸುವಂತೆ ಆಗ್ರಹಿಸಿದರು.
ಇಲಾಖೆ ಕೇವಲ ಅದಿರು ಸಾಗಾಣಿಕೆಗೆ ಮಾತ್ರ ಈ ಭಾಗದಲ್ಲಿ ಗೂಡ್ಸ್‍ಗಾಡಿಗಳನ್ನು ಆರಂಭಿಸಿದ್ದು, ಪ್ರಯಾಣಿಕರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಈ ಮಾರ್ಗದಿಂದ ರೈಲ್ವೇ ಇಲಾಖೆಗೆ ವಾರ್ಷಿಕ 200 ಕೋಟಿ ರೂಪಾಯಿ ಆದಾಯವಿದ್ದರೂ ಪ್ರಯಾಣಿಕರ ಬೇಡಿಕೆಗಳ ಬಗ್ಗೆ ನಿರ್ಲಕ್ಷ ವಹಿಸಿರುವುದು ಖಂಡನೀಯವಾಗಿದೆ. ಕೂಡಲೇ ಹೊಸಪೇಟೆ-ದಾವಣಗೆರೆ ನಡುವೆ ಪ್ರತಿನಿತ್ಯ ಎರಡು ಕಡೆಯಿಂದ ಏಕ ಕಾಲಕ್ಕೆ ಪ್ರಯಾಣಿಕರ ರೈಲು ಆರಂಭಿಸಬೇಕು.  ಅದೇ ರೀತಿ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಪ್ರತಿನಿತ್ಯ ಮಂತ್ರಾಲಯಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ-ಹೊಸಪೇಟೆ -ಗುಂತಕಲ್ ಮಾರ್ಗವಾಗಿ ಮುಂಜಾನೆ ರೈಲು ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ನಗರದ ಅನಂತಶಯನಗುಡಿ ರೈಲ್ವೇ ಮೇಲ್‍ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು.   ಹಗರಿಬೊಮ್ಮನಹಳ್ಳಿಯಲ್ಲಿ ಜನರ ಅನುಕೂಲಕ್ಕಾಗಿ ಎಲ್.ಸಿ.ಗೇಟ್ ನಂ : 38 ಬಳಿ ಮೇಲ್‍ಸೇತುವೆ ನಿರ್ಮಿಸಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಿದರು.
ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಕೆ.ಮಹೇಶ್, ಹಾಗೂ ಪದಾಧಿಕಾರಿಗಳಾದ ವಿಶ್ವನಾಥ ಕೌತಾಳ್, ಪಾಯಾಗಣೇಶ್, ಬಿ.ಕೆ.ಆಚಾರ್, ಲೋಗನಾತನ್, ಹಾಗೂ ಹಗರಿಬೊಮ್ಮನಹಳ್ಳಿ ವಾಣಿಜ್ಯೋದಮ ಸಂಘದ ಅಧ್ಯಕ್ಷ ಎಸ್.ಎಂ.ಚಂದ್ರಯ್ಯ ಹಾಗೂ ಕಾರ್ಯದರ್ಶಿ ಕೆ.ಗಿರಿರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.