ಬಹುತ್ವದಿಂದ ಕೂಡಿದ್ದೇ ಜಾನಪದ ಸಂಸ್ಕøತಿ:ಡಾ. ಜಗನ್ನಾಥ ಹೆಬ್ಬಾಳೆ

ಬೀದರ:ಆ.25:ಭಾರತೀಯ ಸಮಾಜ ಬಹುತ್ವದಿಂದ ಕೂಡಿದೆ. ಭಾರತ ದೇಶ ಆದರ್ಶ ಪ್ರಾಯವಾಗಿದೆ. ತನ್ನ ಮೂಲ ಸತ್ವ ಆಶಯಗಳನ್ನು ಉಳಿಸಿಕೊಂಡು ಕಾಲಕ್ಕೆ ತಕ್ಕಂತೆ ರೂಪಾಂತರ ಆಗುವ ಪರಂಪರೆಯನ್ನು ಜಾನಪದ ಹೊಂದಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಜಗನ್ನಾಥ ಹೆಬ್ಬಾಳೆ ಅವರು ಮಾತನಾಡಿದರು.

ಕರ್ನಾಟಕ ಜಾನಪದ ಪರಿಷತ್ತು ಬೀದರ ಜಿಲ್ಲಾ ಹಾಗೂ ತಾಲೂಕ ಘಟಕ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪಿಜಿ ಸೆಂಟರ್ ಬೀದರ ಆಶ್ರಯದಲ್ಲಿ ಆಯೋಜಿಸಿದ ವಿಶ್ವ ಜಾನಪದ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾನಪದವೆಂದರೆ ನಮ್ಮ ಹಳ್ಳಿ ಮತ್ತು ಗುಡ್ಡಗಾಡು ಬದುಕಿನ ವಿಶ್ವರೂಪ ಇಲ್ಲಿನ ಹಾಡು ಕುಣಿತ, ಮಾತು ಕತೆ, ಉಡುಗೆ ತೊಡುಗೆ, ಊಟ-ಉಪಚಾರ, ದೇವರು-ದಿಂಡರು, ಮಾಟ-ಮಂತ್ರ, ಮದುವೆ-ಮುಂಜಿ, ಹಬ್ಬ-ಹರಿದಿನ, ಹುಟ್ಟು-ಸಾವು, ತೇರು-ಜಾತ್ರೆ, ನಂಬಿಕೆ-ಸಂಪ್ರದಾಯ, ಆಚಾರ-ವ್ಯವಹಾರ, ನ್ಯಾಯ-ನಿಯತ್ತು, ಗಂಟು-ನಂಟು, ಮನೆ-ಮಠ, ಸುಖ-ದುಃಖ ಹೀಗೆ ಬದುಕಿಗೆ ಸಂಬಂಧಿಸಿದ ಸಮಸ್ತವೂ ಕುತೂಹಲಕಾರಿ ಸ್ವಾರಸ್ಯ ಪೂರ್ಣ ಅಂಶಗಳಾಗಿವೆ. ಹಾಡು-ಕುಣಿತ, ಗಾದೆ, ಕಥೆ, ಉಡುಗೆ, ತೊಡುಗೆ, ಊಟ-ಉಪಚಾರ, ಕೃಷಿ, ದೇವರು-ದಿಂಡರು ಊರು-ಕೇರಿ ಮುಂತಾದವುಗಳು ಜಾನಪದ ಲೋಕದ ಪ್ರಕಾರಗಳಾಗಿವೆ ಎಂದರು. ಜಾನಪದ ಉಳಿಸಿಕೊಳ್ಳುವುದು ಎಂದರೇ ಜಾನಪದ ಕಲೆಗಳನ್ನೂ ಉಳಿಸಿಕೊಂಡು ಜಾನಪದ ಕಲಾವಿದರ ಬದುಕು ಭದ್ರವಾಗುವ ಹಾಗೆ ಮಾಡುವುದು. ಈ ದಿಶೆಯಲ್ಲಿ ವಿಶ್ವ ಜಾನಪದ ದಿನಾಚರಣೆ ಅದಕ್ಕೆ ಪ್ರೇರಣೆಯಾಗಲೆಂದು ಡಾ. ಜಗನ್ನಾಥ ಹೆಬ್ಬಾಳೆ ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶ್ರೀ ಪ್ರೇಮಸಾಗರ ದಾಂಡೇಕರ ಅವರು ಮಾತನಾಡುತ್ತ ಜಾನಪದವು ಸಂಪ್ರದಾಯದಿಂದ ಕೂಡಿದೆ. ಕಲೆಗಳೆಲ್ಲವೂ ಜಾತಿ, ಮತ, ದೇಶ ಭಾಷೆಗಳನ್ನು ಮೀರಿದ್ದಾಗಿವೆ. ಈ ಸಾಂಸ್ಕøತಿಕ ಕಲಾ ವಲಯಕ್ಕೆ ಸೇರಿದ ನಾವೇ ನಿಜವಾದ ಭಾರತೀಯರೆಂದು ಹೆಮ್ಮೆಪಡಬೇಕೆಂದು ತಿಳಿಸಿದರು.

ಜನಪದ ಸಂಸ್ಕøತಿ ಕುರಿತು ಉಪನ್ಯಾಸ ನೀಡಿದ ಕನ್ನಡ ಅಧ್ಯಾಪಕರಾದ ಶ್ರೀ ಬಸವರಾಜ ಮೂಲಗೆ ಅವರು ಮಾತನಾಡುತ್ತ ಜನಪದ ಸಂಸ್ಕøತಿ ಎಂಬುದು ಸಂಸ್ಕಾರದಿಂದ ಕೂಡಿದೆ. ಸಂಸ್ಕಾರಗಳಿಲ್ಲದವರು ಜನಪದ ಸಂಸ್ಕøತಿಯ ದೀಕ್ಷೆ ಪಡೆದುಕೊಳ್ಳಲು ಮುಂದಾಗಬೇಕು. ಬಾಯಿಂದ ಬಾಯಿಗೆ ಹರಿದು ಬಂದಿದ್ದು ಜಾನಪದ ಆದರೂ ಅದರಲ್ಲಿ ಎನೆಲ್ಲ ಮುತ್ತು ರತ್ನಗಳಿವೆ. ಮಾನವೀಯತೆ ಇದೆ. ಅವುಗಳನ್ನೆಲ್ಲ ತಮ್ಮ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕೆಂದರು.

ಆರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎಸ್.ಬಿ.ಕುಚಬಾಳ ಅವರು ಸ್ವಾಗತಿಸಿ ಜನಪದ ಹಾಡುಗಳನ್ನು ಹಾಡಿದರು. ದೇವಿದಾಸ ಚಿಮಕೋಡ ಹೆಜ್ಜೆ ಹಾಕಿ ನೃತ್ಯ ಮಾಡಿದರು. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ. ರಾಜಕುಮಾರ ಹೆಬ್ಬಾಳೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಸತಿ ನಿಲಯದ ಮೇಲ್ವಿಚಾರಕರಾದ ಶ್ರೀಯಲ್ಲಪ್ಪ ಮೊನಟಗಿ, ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು, ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಶ್ರೀ ಶಿವಶರಣಪ್ಪ ಗಣೇಶಪುರ, ಬಸವರಾಜ ಹೆಗ್ಗೆ, ರವಿದಾಸ ಕಾಂಬಳೆ, ಪವನ ನಾಟೆಕರ್, ಪವನ ಪಾರೆ ಮುಂತಾದವರು ಭಾಗವಹಿಸಿದರು.