ಬಹುತೇಕ ರಸ್ತೆ ಕಾಮಗಾರಿ ಪೂರ್ಣ – ಶಾಸಕರು

ವಾರ್ಡ್ ೦೬ ಹೊಸೂರು : ೬ ಕೋಟಿ ಕಾಮಗಾರಿಗೆ ಚಾಲನೆ
ರಾಯಚೂರು.ನ.೨೫- ನಗರದ ವಾರ್ಡ್ ೦೬ ರಲ್ಲಿ ಒಟ್ಟು ೬ ಕೋಟಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದ್ದು, ಹೊಸೂರು ಗ್ರಾಮದಲ್ಲಿರುವ ಸಣ್ಣ ಪುಟ್ಟ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುತ್ತದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ಹೊಸೂರಿನಲ್ಲಿ ಪಿಆರ್‌ಇಡಿ ಮತ್ತು ಲೋಕೋಪಯೋಗಿ ಇಲಾಖೆಯ ಅನುದಾನಡಿ ೬ ಕೋಟಿ ಕಾಮಗಾರಿಗೆ ಚಾಲನೆ ನೀಡಿ, ಮಾತನಾಡಿದರು. ಹೊಸೂರಿನಿಂದ ಮಮದಾಪೂರು ಹಳ್ಳಕ್ಕೆ ಹೋಗುವ ಕಾಮಗಾರಿಗೆ ೩.೫೦ ಕೋಟಿ, ಹೊಸೂರಿನಿಂದ ಮಮದಾಪೂರು ಗ್ರಾಮಕ್ಕೆ ಸಂಪರ್ಕ ಕಳುಹಿಸುವ ಮತ್ತೊಂದು ಕಾಮಗಾರಿಗೆ ಸೇರಿದಂತೆ ಒಟ್ಟು ೬ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಚಾಲನೆ ನೀಡಲಾಗಿದೆ. ಹೊಸೂರು ಗ್ರಾಮದಲ್ಲಿ ಯಾವುದೇ ಪ್ರಮುಖ ರಸ್ತೆ ಉಳಿದಿಲ್ಲ. ಸಣ್ಣ ಪುಟ್ಟ ರಸ್ತೆಗಳು ಉಳಿದಿರಬಹುದು. ಅವುಗಳನ್ನು ಶೀಘ್ರವೇ ದುರಸ್ತಿ ಮಾಡಲಾಗುತ್ತದೆಂದು ಭರವಸೆ ನೀಡಿದರು.
ಗ್ರಾಮದಲ್ಲಿ ಯುಜಿಡಿಯ ಅಲ್ಪಪ್ರಮಾಣದ ಸಮಸ್ಯೆ ಇದೆ. ಇದನ್ನು ಶೀಘ್ರವೇ ಪರಿಹರಿಸಲಾಗುತ್ತದೆಂದು ಹೇಳಿದ ಅವರು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆಂದು ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಳ ಆಂಜಿನೇಯ್ಯ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.