
ಮಂಗಳೂರು, ಎ.೧೪- ಪಕ್ಷವು ಅಭ್ಯರ್ಥಿಗಳಿಗೆ ಸಂಬಂಧಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಇನ್ನೂ ೧೨ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ. ಕೆಲವೆಡೆ ಟಿಕೆಟ್ ಅಪೇಕ್ಷಿತರು, ಆಕಾಂಕ್ಷಿಗಳು, ಎಂಎಲ್ ಸಿಗಳು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಬಹುತೇಕ ಕಡೆ ಭಿನ್ನಮತ ಶಮನ ಆಗಲಿದೆ. ಪಕ್ಷದ ಹಿರಿಯರು ಮಾತನಾಡ್ತಾ ಇದಾರೆ. ಹಿರಿಯರ ಜೊತೆಗೂ ನಾನು ಮತ್ತು ಹೈಕಮಾಂಡ್ ಮಾತನಾಡ್ತಾ ಇದೆ, ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರ ಗಳಿಗೆ ಭೇಟಿ ನೀಡಲು ಆಗಮಿಸಿರುವ ಬೊಮ್ಮಾಯಿ ನಗರದಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡುತ್ತಾ ಚುನಾವಣೆಯ ಸಂದರ್ಭದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ಲಕ್ಷ್ಮಣ ಸವದಿ ಹಿರಿಯರಿದ್ದಾರೆ, ಅವರಿಗೆ ಭಾವನೆ ಇದೆ, ಸುದೀರ್ಘ ರಾಜಕೀಯ ಜೀವನದಲ್ಲಿ ಇದ್ದಾರೆ. ಅವರ ಕ್ಷೇತ್ರದ ಜನರ ವಿಶ್ವಾಸ ಅವರು ಉಳಿಸಿಕೊಳ್ಳಬೇಕು. ಆ ಕಡೆಯಿಂದಲೂ ಅವರಿಗೆ ಒತ್ತಡ ಇದೆ, ಸಮಯ ಬೇಕು. ಆದಷ್ಟು ಬೇಗ ಅವರ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ ಎಂದು ಬೊಮ್ಮಾಯಿ ನುಡಿದರು. ತುಂತುರು ಹನಿ ನೀರಾವರಿ ಯೋಜನೆಯಲ್ಲಿ ಸಿಎಂ ಬೊಮ್ಮಾಯಿ ೧,೫೦೦ ಕೋಟಿ ರೂ. ಕೊಳ್ಳೆ ಹೊಡೆದಿದ್ದಾರೆ ಎಂದು ಶಾಸಕ ನೆಹರೂ ಓಲೇಕಾರ್ ಮಾಡಿರುವ ಗಂಭೀರ ಆರೋಪದ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಓಲೇಕಾರ್ ಯಾವ ಆರೋಪ ಬೇಕಾದ್ರೂ ಮಾಡಲಿ. ಯಾವುದೇ ಆರೋಪ ಇದ್ದರೂ ದಾಖಲೆ ಸಮೇತ ಮಾಡಲಿ. ಹೇಳಿಕೆಗಳಿಂದ ಹಗರಣ ಆಗಲ್ಲ, ದಾಖಲೆ ಸಹಿತ ಮಾಡಲಿ, ಸತ್ಯಾಸತ್ಯತೆ ಹೊರಬರಲಿ ಎಂದರು. ಕಾಂಗ್ರೆಸ್ ಮುಂದಿನ ಪಟ್ಟಿಯಲ್ಲಿ ಅಚ್ಚರಿಯ ಹೆಸರು ಬರುತ್ತದೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ, ಬೊಮ್ಮಾಯಿ, ’ಕಾಂಗ್ರೆಸ್ ನಲ್ಲಿ ೬೦-೬೫ ಕಡೆ ಅಭ್ಯರ್ಥಿಗಳೇ ಇರಲಿಲ್ಲ. ಹಾಗಾಗಿ ೧೬೦ ಕ್ಷೇತ್ರಗಳಿಗಷ್ಟೇ ಅಭ್ಯರ್ಥಿ ಘೋಷಣೆ ಮಾಡಿ ನಿಲ್ಲಿಸಿದ್ದಾರೆ. ಕಾಂಗ್ರೆಸ್ ನವರದ್ದು ಆರಂಭ ಶೂರತ್ವ, ಈಗ ಆಮದು ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಇದ್ದಾರೆ. ಅವರು ಅಧಿಕಾರಕ್ಕೆ ಬರೋದಿಲ್ಲ ಎಂದರು. ಬುಧವಾರ ಮತ್ತು ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ಬಸವರಾಜ ಬೊಮ್ಮಾಯಿ ಬೆಳಗ್ಗೆ ಮಂಗಳೂರಿನಿಂದ ಕೊಲ್ಲೂರು ಶ್ರೀ ಕ್ಷೇತ್ರಕ್ಕೆ ತೆರಳಿದರು.