ಬಹುಗ್ರಾಮ ಕುಡಿಯುವ ನೀರು ಯೋಜನೆ: ಕಾಮಗಾರಿಗಳ ತನಿಖೆಗೆ ಸೂಚನೆಚಿತ್ರದುರ್ಗ,ನ.12;  ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿವಾರು ಪರಿಶೀಲಿಸಿ, ತನಿಖೆ ಮಾಡಿ ವರದಿ ನೀಡಲು ಅಧಿಕಾರಿಗಳ ತಂಡ ನೇಮಕಕ್ಕೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಒಪ್ಪಿಗೆ ನೀಡಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಗುಣಮಟ್ಟ ಸೇರಿದಂತೆ ಸಾಧಕ-ಬಾಧಕಗಳ ಕುರಿತು ಕುಲಂಕೂಷವಾದ ವರದಿ ನೀಡಬೇಕು. ಅಧಿಕಾರಿಗಳ ತಂಡದಲ್ಲಿ ಜಿಲ್ಲಾಮಟ್ಟದ  ಅಧಿಕಾರಿಗಳು, ಇಂಜಿನಿಯರ್‍ಗಳು, ಪಿಡಿಒಗಳನ್ನೊಳಗೊಂಡ ತಂಡ ರಚನೆ ಮಾಡಿ 15ದಿನಗಳೊಳಗೆ ತನಿಖೆ ಮಾಡಬೇಕು ವರದಿ ಸಲ್ಲಿಸಬೇಕು. ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಸರ್ಕಾರಕ್ಕೆ ಕಳಿಸಲಾಗುವುದು. ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಬಿಟ್ಟು ಹೋದ ಹಾಗೂ ಉಳಿದ ಜನವಸತಿಗಳನ್ನು ಸೇರ್ಪಡೆಗೊಳಿಸುವ ಸಲುವಾಗಿ ಹಾಗೂ ಎರಡನೇ ಹಂತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಗ್ರಾಮಗಳಿಗೂ ಹೆಚ್ಚುವರಿಯಾಗಿ ಕ್ರಿಯಾಯೋಜನೆ ತಯಾರಿಸಬೇಕು. ಜಿಲ್ಲೆಯ ಯಾವ ಶಾಲೆ, ಅಂಗನವಾಡಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲವೊ ಅಂತಹ ಶಾಲೆ, ಅಂಗನವಾಡಿಗಳ ವರದಿ ನೀಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ; ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಜ್ಞಾನೇಶ್, ಸಮಿತಿ ಸದಸ್ಯರಾದ ಕೃಷಿ ಉಪನಿರ್ದೇಶಕರಾದ ಹುಲಿರಾಜ್, ವಾರ್ತಾಧಿಕಾರಿ ಧನಂಜಯ, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.