ಬಹಿರಂಗ ಹೇಳಿಕೆ ನೀಡದಂತೆ ಶಾಸಕರಿಗೆ ಸಿದ್ದು ತಾಕೀತು

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಡಾ. ಜಿ. ಪರಮೇಶ್ವರ್, ಜಮೀರ್ ಅಹ್ಮದ್‌ಖಾನ್, ರಾಮಲಿಂಗಾರೆಡ್ಡಿ ಮತ್ತಿತರರು ಇದ್ದಾರೆ.

ಬೆಂಗಳೂರು, ಮೇ ೨೪- ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂಬ ಕಟ್ಟೆಚ್ಚರಿಕೆಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಶಾಸಕರಿಗೂ ನೀಡಲಾಗಿದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೈದು ದಿನಗಳು ಅಷ್ಟೇ ಆಗಿದೆ. ಅನಗತ್ಯವಾಗಿ ವಿವಾದ ಸೃಷ್ಠಿಸುವ ಹೇಳಿಕೆಗಳು ಬೇಡ. ಅದರಲ್ಲೂ ನಾಯಕತ್ವಕ್ಕೆ ಸಂಬಂಧಿಸಿದಂತೆ, ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಹೇಳಿಕೆಗಳನ್ನು ಯಾರೂ ನೀಡಬಾರದು ಎಂಬ ಖಡಕ್ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು.
ಸಚಿವ ಎಂ.ಬಿ. ಪಾಟೀಲ್ ಅವರ ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಎಂಬ ಹೇಳಿಕೆ ಕಾಂಗ್ರೆಸ್‌ನಲ್ಲಿ ವಿವಾದದ ಕಿಡಿಗೆ ಕಾರಣವಾದ ಬೆನ್ನಲ್ಲೆ ಎಚ್ಚೆತ್ತಿರುವ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲಕ ಎಲ್ಲ ಶಾಸಕರಿಗೂ ವಿವಾದಾತ್ಮಕ ಹೇಳಿಕೆ ನೀಡದಂತೆ ಸಂದೇಶ ನೀಡಿದೆ.
ಅಭಿನಂದನೆ
ಇದಕ್ಕೂ ಮೊದಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಯು.ಟಿ. ಖಾದರ್ ಅವರಿಗೆ ಶುಭ ಹಾರೈಸಿದರು.
ಸಿದ್ದರಾಮಯ್ಯ ಮಾತು
ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಜನತೆ ಅಪಾರ ನಿರೀಕ್ಷೆಗಳನ್ನು ನಮ್ಮ ಮೇಲೆ ಇಟ್ಟುಕೊಂಡು ಬಹುಮತ ನೀಡಿದ್ದಾರೆ. ೫ ವರ್ಷಗಳ ಕಾಲ ಅಭಿವೃದ್ಧಿ ಕಡೆಗೆ ಗಮನಹರಿಸಿ, ನಿಮ್ಮ ಕ್ಷೇತ್ರಗಳ ಜನರ ನಿರೀಕ್ಷೆ ಈಡೇರಿಸಿ ಎಂದು ಎಲ್ಲ ಶಾಸಕರಿಗೂ ಸೂಚಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ಶಾಸಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ವಿರೋಧ ಪಕ್ಷದವಾದ ಬಿಜೆಪಿಯವರು ಸದನದಲ್ಲಿ ಮಾಡುವ ಸುಳ್ಳು ಆರೋಪಗಳನ್ನು ಸಮರ್ಥವಾಗಿ ಎದುರಿಸಬೇಕು. ಪ್ರತಿ ಶಾಸಕರು ಕ್ರಿಯಾಶೀಲತೆಯಿಂದ ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಕೇಂದ್ರದಿಂದ ನಮ್ಮ ತೆರಿಗೆ ಪಾಲು ಸಮರ್ಪಕವಾಗಿ ಬರುತ್ತಿಲ್ಲ. ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ನಾವು ಕ್ರಿಯಾಶೀಲ ಒತ್ತಡ ಮತ್ತು ಬೇಡಿಕೆಯಿಂದ ನಮ್ಮ ಪಾಲನ್ನು ಪಡೆದುಕೊಳ್ಳಬೇಕು ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಈಗ ಇರುವ ಸಂಸದರು ನಾಡಿನ ಜನತೆಯ ಪರವಾಗಿ ಬಾಯಿ ಬಿಡುತ್ತಿಲ್ಲ. ಹೀಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಈ ಸಂಸದರಿಗೆ ತಕ್ಕ ಉತ್ತರ ಕೊಡಬೇಕು. ಹಾಗಾಗಿ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪರವಾಗಿ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ ಹೇಳಿದರು.
ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಎಲ್ಲ ಸಚಿವರು ಹಾಗೂ ಕಾಂಗ್ರೆಸ್‌ನ ಬಹುತೇಕ ಸದಸ್ಯರು ಪಾಲ್ಗೊಂಡಿದ್ದರು.