ಬಹಿರಂಗ ಚರ್ಚೆ ಆಹ್ವಾನ ಸ್ವೀಕರಿಸಿದ ಸಂಸದ ಖೂಬಾ

ಬೀದರ ಅ 26: ಸಂಸದ ಭಗವಂತ ಖೂಬಾ ಮತ್ತು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರ ನಡುವೆ ನಡೆದ ಆರೋಪ ಪ್ರತ್ಯಾರೋಪಗಳಿಗೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧವಾಗಿದೆ. ಶಾಸಕ ಈಶ್ವರ ಖಂಡ್ರೆ ನೀಡಿದ ಬಹಿರಂಗ ಚರ್ಚೆಯ ಆಹ್ವಾನವನ್ನು ಸಂಸದ ಭಗವಂತ ಖೂಬಾ ಸ್ವೀಕರಿಸಿದ್ದಾರೆ.ನವೆಂಬರ್ 5 ರಂದು ಬೆಳಿಗ್ಗೆ 11 ಗಂಟೆಗೆ ಚೆನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಬಹಿರಂಗ ಚರ್ಚೆ ನಡೆಯಲಿ ಎಂದು ಸಂಸದ ಭಗವಂತ ಖೂಬಾ ಶಾಸಕ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.
ಸಂಸದರು ತಮ್ಮ ಪತ್ರದಲ್ಲಿ,ಈ ಬಹಿರಂಗ ಚರ್ಚೆಯೂ ಸುಸೂತ್ರವಾಗಿ ನಡೆಯಬೇಕಾದರೆ ಅದಕ್ಕೆ ಒಂದು ಸಮಿತಿಯನ್ನು ರಚಿಸೋಣ. ಆ ಸಮಿತಿಗೆ ಜಿಲ್ಲೆಯ ಹಿರಿಯ ಶಾಸಕ, ಮಾಜಿ ಮಂತ್ರಿ ಬಂಡೆಪ್ಪಾ ಖಾಶೆಂಪೂರರನ್ನು ಅಧ್ಯಕ್ಷರನ್ನಾಗಿ,.ಉಳಿದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸೋಣ.ಚರ್ಚೆಯ ಸಮಯದಲ್ಲಿ ಸಮಯ ಪರಿಪಾಲನೆ, ವಿಷಯ ದಾರಿ ತಪ್ಪದಂತೆ ನೋಡಲು ಒಬ್ಬ ಮಧ್ಯಸ್ಥಗಾರರನ್ನು ನೇಮಿಸಬೇಕು.ಜೊತೆಗೆ ಈ ಬಹಿರಂಗ ಚರ್ಚೆಗೆ ಆಮಂತ್ರಣ ಪತ್ರಿಕೆ ಮುದ್ರಿಸಿ, ಪ್ರೇಕ್ಷಕರಾಗಿ ಎಲ್ಲರನ್ನೂ ಆಮಂತ್ರಿಸಿ, ಚರ್ಚೆಯನ್ನು ಅರ್ಥಪೂರ್ಣವಾಗಿ ಮಾಡೋಣ.ಬಹಿರಂಗ ಚರ್ಚೆಯಲ್ಲಿ ಭ್ರಷ್ಟಚಾರ, ಸ್ವಜನಪಕ್ಷಪಾತ, ಮನೆ ಹಗರಣ, ಬ್ರೀಮ್ಸ್ ಆಸ್ಪತ್ರೆಯಲ್ಲಿ ನಡೆದ ಅವ್ಯವಹಾರ, ಶಾಂತಿವರ್ಧಕ ಶಿಕ್ಷಣ ಸಂಸ್ಥೆ, ಹಿರೇಮಠ ಸಂಸ್ಥಾನ ಭಾಲ್ಕಿ, ಬೀದರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಮಹಾತ್ಮಾ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು, ಅನುಭವ ಮಂಟಪಕ್ಕೆ ಸಂಬಂಧಿಸಿದ ವಿಷಯಗಳು, ವೀರಶೈವ ಲಿಂಗಾಯತರ ವಿಷಯಗಳು, ಜಿಲ್ಲೆಯ ಅಭಿವೃದ್ದಿ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸೋಣ.ನಿಮ್ಮ ಎಲ್ಲಾ ವಿಷಯಗಳಿಗೆ ಉತ್ತರಿಸಲು ನಾನು ಸಿದ್ಧನಿದ್ದೇನೆ ಮತ್ತು ನನ್ನ ಎಲ್ಲಾ ಸವಾಲುಗಳಿಗೆ ಉತ್ತರಿಸಲು ನೀವು ಸಿದ್ಧರಾಗಿ ಎಂದು ಪತ್ರದಲ್ಲಿ ಬರೆದಿದ್ದಾರೆ.