ಬಹಿರಂಗ ಚರ್ಚೆಗೆ ಸಿದ್ಧ ಮಾಲೀಕಯ್ಯ

ಅಫಜಲಪುರ:ನ.20: ಸುದ್ದಿ ಮಾಧ್ಯಮದ ಮುಂದೆ ಬಿಜೆಪಿ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಶಾಸಕ ಪ್ರಿಯಾಂಕ್ ಖರ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಮಂತ್ರಿ ಮಾಲೀಕಯ್ಯ ವ್ಹಿ ಗುತ್ತೇದಾರ ಹೇಳಿದರು.
ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಮೇಲಿದಂಲೆ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯವರು ಇನ್ನೂ ದುರಹಂಕಾರದಿಂದ ಹೊರಬಂದಿಲ್ಲ. ತಮ್ಮ ವಿರುದ್ಧ ಆರೋಪಗಳ ಕುರಿತು ಮಾಧ್ಯಮದವರ ಸಮ್ಮುಖದಲ್ಲಿಯೇ ಸಂವಾದಕ್ಕೆ ಆಹ್ವಾನ ನೀಡಿದರು. ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನಡೆದ ಅವ್ಯವಹಾರಗಳ ಕುರಿತು ಬೇಕಾದರೆ ತಾವೆ ದಾಖಲೆ ಸಮೇತ ಬಹಿರಂಗ ಪಡಿಸಿ ಇಲ್ಲವಾದರೆ ನೀವು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಮಾಡಿದ ಅವ್ಯವಹಾರದ ಕುರಿತು ತಾವು ದಾಖಲೆಗಳ ಸಮೇತ ಬಹಿರಂಗ ಪಡಿಸುತ್ತೇನೆಂದು ಮಾಲೀಕಯ್ಯ ಗುತ್ತೇದಾರ, ಪ್ರಿಯಾಂಕ್ ಖರ್ಗೆಯವರಿಗೆ ಸವಾಲು ಹಾಕಿದರು.
ಪ್ರಿಯಾಂಕ್ ಖರ್ಗೆಯವರದ್ದು ಇನ್ನೂ ಚಿಕ್ಕ ವಯಸ್ಸು, ರಾಜಕೀಯವಾಗಿ ಎತ್ತರಕ್ಕೆ ಬೆಳೆಯಬೇಕಾಗಿದೆ. ಕೇವಲ ಒಂದು ಸಮುದಾಯವನ್ನು ಸೀಮಿತಗೊಳಿಸದೆ ಎಲ್ಲ ಸಮುದಾಯಗಳೊಂದಿಗೆ ಕೂಡಿಕೊಂಡು ಹೋಗುವುದನ್ನು ಕಲಿಯಬೇಕಾಗಿದೆ. ಹಿರಿಯರನ್ನು ಗೌರವಿಸುವುದನ್ನು ಮೊದಲು ತಿಳಿದುಕೊಳ್ಳಬೇಕು. ಅವರ ತಂದೆ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ತಂದೆಯೊಂದಿಗೆ ನಿಕಟವಾದ ಸಂಬಂಧವಿರಿಸಿಕೊಂಡಿದ್ದರು. ಈಗಲು ತಾವು ವೈಯುಕ್ತಿಕವಾಗಿ ಉತ್ತಮ ರೀತಿಯ ಸಂಪರ್ಕ ಹೊಂದಿದ್ದೇನೆ. ರಾಜಕೀಯವೇ ಬೇರೆ, ವೈಯುಕ್ತಿಕ ಸಂಬಂಧಗಳೇ ಬೇರೆ ರಾಜಕೀಯದಲ್ಲಿದ್ದಾಗ ಸೇಡು, ಪ್ರತಿಸೇಡು ಇರುವುದು ಸಾಮಾನ್ಯವಾಗಿದೆ. ಅದಾಗ್ಯೂ ರಾಜಕೀಯೇತರ ಸಂಬಂಧಗಳನ್ನು ಪ್ರಿಯಾಂಕ್ ಖರ್ಗೆಯವರನ್ನು ಹೊರತುಪಡಿಸಿ ಅವರ ಕುಟುಂಬದಲ್ಲಿ ನಾನು ಇನ್ನೂ ಉತ್ತಮ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದರು.
ಈಗಲೂ ಅವರ ತಾಯಿ ತಮ್ಮನ್ನು ಸಹ ಪ್ರೀತಿಯಿಂದ ಮಾತನಾಡಿಸುತ್ತಾರೆ. ಮತ್ತು ರಾಧಾಕೃಷ್ಣನ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿಯವರು ಕೂಡಾ ತಮಗೆ ಇಂದು ಕೂಡಾ ಗೌರವದಿಂದ ಮಾತನಾಡಿಸುತ್ತಾರೆ. ಆದರೆ ಶಾಸಕ ಪ್ರಿಯಾಂಕ್ ಖರ್ಗೆಯವರಲ್ಲಿ ಗೌರವದ ಕೊರತೆ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಪ್ರಿಯಾಂಕ್ ಖರ್ಗೆಯವರ ದುರಹಂಕಾರದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆಯವರು ಲಕ್ಷ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪದೇ ಪದೇ ತಪ್ಪು ಮಾಡುವುದನ್ನು ತಿದ್ದಿಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು. ಪಕ್ಷದ ಅನೇಕ ಹಿರಿಯ ನಾಯಕರು ತಮ್ಮ ಮುಂದೆ ಪ್ರಿಯಾಂಕ್ ಖರ್ಗೆಯವರು ಏಕ ವಚನದಲ್ಲಿ ಮಾತನಾಡುತ್ತಾರೆ ಎನ್ನುವುದು ತಿಳಿದು ಬಂದಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.