ಕಲಬುರಗಿ:ಅ.24: ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬಗಳನ್ನೂ ವಿಶೇಷ ಅರ್ಥಗಳೊಂದಿಗೆ ಆಚರಿಸಿಕೊಂಡು ಬರಲಾಗಿದೆ. ವಿಜಯದಶಮಿ ಯ ಹಬ್ಬದಲ್ಲಿ ಬಹಿರಂಗದ ವಿಜಯವನ್ನು ಮಾಡುವುದಷ್ಟೆ ಅಲ್ಲದೇ ಅಂತರಂಗದ ವಿಜಯವನ್ನು ಮಾಡುವುದೇ ನಿಜವಾದ ವಿಜಯದಶಮಿ ಆಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠಾಧ್ಯಕ್ಷರಾದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಕಲಬುರಗಿ ನಗರದ ಸಮಾಧಾನ ಧ್ಯಾನಮಂದಿರದ ಪರಿಸರದಲ್ಲಿ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಗುರುದೇವ ಸೇವಾ ಸಂಸ್ಥೆಯವತಿಯಿಂದ ಆಯೋಜಿಸಿದ್ದ ಗುರುಸೇವಾ ಮಾಸಾಚರಣೆ ಸಮಾರೋಪ ಹಾಗೂ ಸಮಾಧಾನ ನಿಸರ್ಗೋಪಚಾರ ಮತ್ತು ಯೋಗ ಸಾಧನಾ ಕೇಂದ್ರ ಉದ್ಘಾಟನೆ ಹಾಗೂ ವಿಜಯದಶಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಗತ್ತಿನಲ್ಲಿ ಧೀರರು, ಶೂರರು, ವೀರರು ಯಾರು ಎಂದರೆ ಕಟ್ಟು ಮಸ್ತಾಗಿ ದೇಹವನ್ನು ಬೆಳೆಸಿಕೊಂಡವರು, ಅಥವಾ ನಾಲ್ಕು ಜನವನ್ನು ಏಕಕಾಲಕ್ಕೆ ಹೊಡೆದು ಹಾಕುವವರು ಅಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಯಾರು ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ಪಾರಮಾರ್ಥಿಕರಾಗಿ ಆತ್ಮ ತತ್ವವನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಾರೋ ಅವರು ನಿಜವಾದ ಧೀರರು ಎಂಬುದು ಗೀತಾ ಸಾರವಾಗಿದೆ. ಅಂತಹ ವಿಜಯ ನಮ್ಮದಾಗಬೇಕು. ಹಾಗೆ ಇಂದ್ರಿಯಗಳನ್ನು ಜಯಿಸಿ ವಿಜಯಿಗಳಾಗುವುದೇ ವಿಜಯದಶಮಿಯಾಗಿದೆ ಎಂದು ವಿವರಿಸಿದರು.
ಸಂಕಷ್ಟಗಳನ್ನು ಹೊಂದಿದ ಭಕ್ತ ತನ್ನ ಕಷ್ಟ ನಿವಾರಣೆಗಾಗಿ ಎಲ್ಲಾಕಡೆ ತಿರುಗುವುದಕ್ಕಿಂತ ತನ್ನ ಇಷ್ಟಲಿಂಗದ ಅನುಸಂಧಾನ ಮಾಡುತ್ತಾ ಹೋದರೆ ತನ್ನ ಕಷ್ಟಗಳು ಪರಿಹಾರ ಆಗುತ್ತವೆ. ಇಷ್ಟಲಿಂಗದಲ್ಲಿ ಆ ಶಕ್ತಿ ಇದೆ. ಇದು ಗುರುಸೇವಾ ಮಾಸಾಚರಣೆಯ ಉದ್ದೇಶವಾಗಿದೆ. ಈ ಮಾರ್ಗವನ್ನು ಹಾಕಿಕೊಟ್ಟವರು ಮೌನ ತಪಸ್ವಿ ಜಡೆಯ ಶಾಂತಲಿಂಗೇಶ್ವರ ಮಹಾಗುರುಗಳು. ಈ ಮಾರ್ಗದಿಂದ ಸಾವಿರಾರು ಭಕ್ತರು ಸಂಕಟಗಳನ್ನು ನಿವಾರಿಸಿಕೊಳ್ಳುವಲ್ಲಿ ಸಶಕ್ತರಾಗಿದ್ದಾರೆ ಎಂದು ಅಮರೇಶ್ವರ ಶಿವಾಚಾರ್ಯರು ಹೇಳಿದರು.
ಸಮಾಧಾನ ಪರಿಸರ ನಿಮಗಾಗಿ. ನಿಮ್ಮ ಮನಸ್ಸಿನ ಶಾಂತಿಗಾಗಿ. ಇಲ್ಲಿ ಎಲ್ಲರಿಗೂ ಅವಕಾಶವಿದೆ. ಎಲ್ಲರೂ ಪುರಾತನ ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಶ್ರೀಗಳು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಗೋದುತಾಯಿ ಮಹಿಳಾ ಕಾಲೇಜಿನ ನಿವೃತ್ತ ಪಾಂಶುಪಾಲರಾದ ನಿಂಗಮ್ಮ ಪತಂಗೆ ಮಾತನಾಡಿದರು. ಮುಂಬಯಿಯ ಮಹಾಂತೇಶ ಹಿರೇಮಠ, ಶಿಕ್ಷಕರಾದ ಶಿವಶಂಕರ ಇಟಗಿ, ನಿಸರ್ಗ ಚಿಕಿತ್ಸಕರಾದ ನಿತ್ಯಾನಂದ ನುಡಿಸೇವೆ ಸಲ್ಲಿಸಿದರು. ಸಮಾಧಾನದ ಸದ್ಭಕ್ತರಾದ ಅಣ್ಣಾರಾಯ ಪಾಟಿಲ ಬೊಮ್ಮನಹಳ್ಳಿ ನಿರೂಪಿಸಿದರು. ಹಲವಾರು ಸದ್ಭಕ್ತರಿಂದ ಮೌನತಪಸ್ವಿಗಳ ನಾಣ್ಯದ ತುಲಾಭಾರ ಸೇವೆ ನಡೆಯಿತು. ಕಲಬುರಗಿ ಹಾಗೂ ಸಮಾಧಾನದ ಸಾವಿರಾರು ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿತು.