
ಚಿಕ್ಕಮಗಳೂರು,ಸೆ.೭- ಜಿಲ್ಲೆಯ ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್‌ನಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್ ವೇಗವಾಗಿ ಅಡ್ಡಾದಿಡ್ಡಿ ಚಲಿಸಿ ನಡೆಸಿದ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಮೃತಪಟ್ಟರೆ, ಇನ್ನೊಬ್ಬಳ ಸ್ಥಿತಿ ಗಂಭೀರವಾಗಿದೆ.ಅಪಘಾತ ಖಂಡಿಸಿ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಖಾಸಗಿ ಎಂಡಿಎಸ್ ಎಂಡ್ ಸನ್ಸ್ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್‌ನಲ್ಲಿ ಬಸ್ ಬೆಳಿಗ್ಗೆ ಏಕಾಏಕಿ ವೇಗವಾಗಿ ಅಡ್ಡಾದಿಡ್ಡಿ ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಮಕ್ಕಳ ಮೇಲೆ ನುಗ್ಗಿದ್ದು ಅದರಡಿ ಸಿಲುಕಿ ಗಾಯಗೊಂಡಿದ್ದ ತುಳಸಿ (೧೫) ಮೃತಪಟ್ಟಿದ್ದಾಳೆ.ಗಾಯಗೊಂಡಿದ್ದ ತುಳಸಿ ಹಾಗೂ ನಿವೇದಿತ (೧೪)ಳನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲಿ ತುಳಸಿ ಮೃತಪಟ್ಟಿದ್ದು ನಿವೇದಿತಾಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ.ವೇಗವಾಗಿ ಬಂದ ಚಾಲಕನ ನಿಯಂತ್ರಣ ತಪ್ಪಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆಯೇ ಹರಿದಿತ್ತು. ಒಮ್ಮಿಂದೊಮ್ಮೆಗೇ ನುಗ್ಗಿದ ಬಸ್ಸಿನಡಿ ಸಿಲುಕಿದ ವಿದ್ಯಾರ್ಥಿಗಳಲ್ಲಿ ಒಬ್ಬಾಕೆ ಮೃತಪಟ್ಟಿದ್ದು ಇನ್ನೊಬ್ಬಳು ಗಂಭೀರವಾಗಿದ್ದರೆ,ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಇಬ್ಬರ ಸ್ಥಿತಿ ಗಂಭೀರವಾಗಿದ್ದರೆ ಉಳಿದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.ಮಕ್ಕಳು ಶಾಲೆಗೆ ಹೋಗುವುದಕ್ಕಾಗಿ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಎಂಡಿಎಸ್ ಎಂಡ್ ಸನ್ಸ್ ಖಾಸಗಿ ಬಸ್ ಎಂದಿನಂತೆ ಬಂದಿತ್ತು. ಆದರೆ, ಅತಿಯಾದ ವೇಗದಲ್ಲಿದ್ದ ಪರಿಣಾಮ ನಿಲ್ಲಬೇಕಾಗಿದ್ದ ಬಸ್ ನಿಯಂತ್ರಣ ತಪ್ಪಿ ವಿದ್ಯಾರ್ಥಿಗಳ ಮೇಲೆಯೇ ಹರಿದಿದೆ.ಕೊನೆಗೆ ಈ ಬಸ್ ಪಕ್ಕದ ಮನೆಗಳತ್ತ ಧಾವಿಸಿದ್ದು ಡಿಕ್ಕಿಯ ರಭಸಕ್ಕೆ ಮನೆಯ ಮುಂಭಾಗದ ಚಾವಣಿ ಸಂಪೂರ್ಣ ಹಾನಿಯಾಗಿದೆ. ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿದ್ದರು.ಈ ಭಾಗದಲ್ಲಿ ಖಾಸಗಿ ಬಸ್‌ಗಳು ವಿಪರೀತ ವೇಗದಿಂದ ಸಂಚರಿಸುತ್ತಿದ್ದು, ಇದರ ಬಗ್ಗೆ ಈಗಾಗಲೇ ಹಲವು ಬಾರಿ ದೂರು ನೀಡಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಕ್ಕಳ ಸಾಲು ಸಾಲು ಸಾವು:
ಬೆಂಗಳೂರಿನ ಹೊರವಲಯದ ದೊಡ್ಡಬಳ್ಳಾಪುರದಲ್ಲಿ ನಿನ್ನೆ ರಸ್ತೆ ಬದಿಯಲ್ಲಿ ನಿಂತಿದ್ದ ಪುಟ್ಟ ಮಗುವೊಂದನ್ನು ಟ್ರ್ಯಾಕ್ಟರ್ ಬಲಿ ಪಡೆದಿತ್ತು. ದೊಡ್ಡಬಳ್ಳಾಪುರದ ಡಿಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಘಟನೆಯಲ್ಲಿ ಮೃತಪಟ್ಟ ಮಗುವಿನ ಹೆಸರು ದರ್ಶನ್. ಕೇವಲ ಮೂರು ವರ್ಷ. ತೀವ್ರವಾಗಿ ಗಾಯಗೊಂಡ ಮಗು ಮತ್ತು ಅಜ್ಜಿ ಇಬ್ಬರನ್ನೂ ಸಮೀಪದ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿತ್ತು.
ಕೆಲವು ವಾರಗಳ ಹಿಂದೆ ಮಂಡ್ಯದ ಗೊಲ್ಲರ ದೊಡ್ಡಿಯಲ್ಲಿ ಟ್ಯೂಷನ್ ಮುಗಿಸಿ ಮರಳುತ್ತಿದ್ದ ಐವರು ಮಕ್ಕಳ ಮೇಲೆ ಟಾಟಾ ಏಸ್ ವಾಹನವೊಂದು ಹರಿದು ನಾಲ್ವರು ಮೃತಪಟ್ಟಿದ್ದರು.