
ಕಲಬುರಗಿ,ಆ.31-ಮಹಿಳೆಯೊಬ್ಬರು ಮಕ್ಕಳೊಂದಿಗೆ ಬಸ್ ಹತ್ತುತ್ತಿದ್ದ ವೇಳೆ ಅವರ ವ್ಯಾನಿಟಿ ಬ್ಯಾಗಿನಲ್ಲಿದ್ದ 64 ಸಾವಿರ ರೂ.ಮೌಲ್ಯದ ಚಿನ್ನಾಭರಣ, ನಗದು ಕಳವಾದ ಘಟನೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಜೇವರ್ಗಿಯ ಖಾಜಾ ಕಾಲೋನಿಯ ರುಕ್ಸನಾ ಬೇಗಂ (31) ಎಂಬುವವರೆ ಚಿನ್ನಾಭರಣ, ನಗದು ಕಳೆದುಕೊಂಡಿದ್ದಾರೆ.
ಮುಂಬೈನಲ್ಲಿ ವಾಸವಿರುವ ತಂದೆ-ತಾಯಿಯನ್ನು ನೋಡಿಕೊಂಡು ಬರಲು ಮಕ್ಕಳೊಂದಿಗೆ ಹೋಗಿದ್ದ ರುಕ್ಸನಾ ಬೇಗಂ ಅವರು ಅಲ್ಲಿಂದ ಕಲಬುರಗಿ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಜೇವರ್ಗಿಗೆ ಹೋಗಲೆಂದು ವಿಜಯಪುರ ಕಡೆ ಹೊರಟಿದ್ದ ಬಸ್ ಹತ್ತುತ್ತಿದ್ದ ವೇಳೆ ವ್ಯಾನಿಟಿ ಬ್ಯಾಗಿನ ಜಿಪ್ ತೆರೆದಿದ್ದು ನೋಡಿ ಗಾಬರಿಯಾಗಿ ಪರಿಶೀಲಿಸಿದಾಗ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಒಂದು ಜೊತೆ ಕಿವಿಯೋಲೆ, 12 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಬಟ್ಟುಂಗರ, 8 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಮೂಗಿನ ನತ್ತು ಮತ್ತು 4 ಸಾವಿರ ರೂ.ನಗದು ಸೇರಿ 64 ಸಾವಿರ ರೂ.ಮೌಲ್ಯದ ಚಿನ್ನಾಭರಣ, ನಗದು ಕಳವಾದದ್ದು ಗಮನಕ್ಕೆ ಬಂದಿದೆ. ಈ ಸಂಬಂಧ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.