ಕಲಬುರಗಿ,ಜೂ.22-ಮಹಿಳೆಯೊಬ್ಬರು ಬಸ್ ಹತ್ತುವಾಗ 1.60 ಲಕ್ಷ ರೂ.ಮೌಲ್ಯದ 40 ಗ್ರಾಂ.ಬಂಗಾರದ ತಾಳಿ ಚೈನ್ ಕಳವಾದ ಘಟನೆ ನಡೆದಿದೆ.
ಈ ಸಂಬಂಧ ಇಲ್ಲಿನ ಜಯನಗರ ನಿವಾಸಿ ಸಿದ್ದಮ್ಮ ಶಂಕರಗೌಡ ಕೋಟಿ (27) ಎಂಬುವವರು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸಿದ್ದಮ್ಮ ಕೋಟಿ ಅವರು ಸೇಡಂನಲ್ಲಿರುವ ತಮ್ಮ ತಾಯಿಯ ಮನೆಗೆ ಹೋಗಲೆಂದು ಖರ್ಗೆ ಸರ್ಕಲ್‍ನಲ್ಲಿ ಹೋಸದಾಗಿ ನಿರ್ಮಾಣ ಮಾಡಿರುವ ಬಸ್‍ಸ್ಟಾಫ್‍ನಲ್ಲಿ ಸೇಡಂಗೆ ಹೋಗುವ ಬಸ್ ಹತ್ತಿದ್ದಾರೆ. ಬಸ್ ಓಂನಗರ ಗೇಟ್ ಹತ್ತಿರ ಹೋದಾಗ ಟಿಕೆಟ್ ಪಡೆಯಲೆಂದು ವ್ಯಾನಿಟಿ ಬ್ಯಾಗ್‍ನಲ್ಲಿಟ್ಟಿದ್ದ ಹಣ ತೆಗೆಯಲು ಹೋಗಿದ್ದಾರೆ. ಈ ವೇಳೆ ವ್ಯಾನಿಟಿ ಬ್ಯಾಗ್‍ನಲ್ಲಿಟ್ಟಿದ್ದ ಬಂಗಾರದ ತಾಳಿ ಚೈನ್ ಕಳವಾಗಿರುವುದು ಅವರ ಗಮನಕ್ಕೆ ಬಂದಿದೆ.
ಈ ಸಂಬಂಧ ಅವರು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
ಹಾವು ಕಚ್ಚಿ ಬಾಲಕ ಸಾವು
ಕಲಬುರಗಿ,ಜೂ.22-ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಮಾಡಿಯಾಳ ತಾಂಡಾದಲ್ಲಿ ನಡೆದಿದೆ.
ಚಂದರ ಉಮೇಶ ಚವ್ಹಾಣ್ (5) ಮೃತಪಟ್ಟ ಬಾಲಕ.
ಉಮೇಶ ಚವ್ಹಾಣ್ ಮತ್ತು ಅವರ ಪತ್ನಿ ದೀಪಾ ಅವರು ಮಗ ಚಂದರನನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದರು. ಹೊಲದಲ್ಲಿ ಕೆಲಸ ಮಾಡುವಾಗ ಮಗುವನ್ನು ಮರದ ಕೆಳಗೆ ನೆರಳಿಗೆ ಕೂಡಿಸಿದ್ದರು. ಈ ವೇಳೆ ಹಾವು ಕಚ್ಚಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ: 242 ಕ್ವಿಂಟಾಲ್ ಅಕ್ಕಿ ಜಪ್ತಿ
ಕಲಬುರಗಿ,ಜೂ.22-ಅಕ್ರಮವಾಗಿ ಸಂಗ್ರಹಿಸಿ ಇಡಲಾಗುತ್ತಿದ್ದ 242 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಆಳಂದ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಆಳಂದ ಪಟ್ಟಣದಲ್ಲಿ ಇಂದು ಜಪ್ತಿ ಮಾಡಿದ್ದಾರೆ.
ಆಳಂದ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲು ಒಂದು ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ 124 ಕ್ವಿಂಟಾಲ್ ಮತ್ತು ಇನ್ನೊಂದು ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ 118 ಕ್ವಿಂಟಾಲ್ ಅಕ್ಕಿ ಸೇರಿ 242 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದಾರೆ.
ಒಂದೇ ವಾರದ ಅವಧಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಜಪ್ತಿ ಮಾಡಿದ ಎರಡನೇ ಪ್ರಕರಣ ಇದಾಗಿದೆ. ಇತ್ತೀಚೆಗೆ ಕಲಬುರಗಿಯಲ್ಲಿ 460 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಲ್ಲೂರ್ ರೋಡ್: ಹಾವು ಕಚ್ಚಿ ಬಾಲಕ ಸಾವು
ಚಿಂಚೋಳಿ,ಜೂ.22-ವಿಷಪೂರಿತ ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟ ಘಟನೆ ಮಿರಿಯಾಣ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲೂರ್ ರೋಡ್ ಗ್ರಾಮದಲ್ಲಿ ನಡೆದಿದೆ.
ಈರಣ್ಣ ತಂದೆ ತುಳಜಪ್ಪ (12) ಮೃತಪಟ್ಟ ಬಾಲಕ.
ಹೊಲದಲ್ಲಿ ಶೆಡ್ ನಿರ್ಮಿಸಲಾಗಿದ್ದು, ಮಳೆ ಬರುತ್ತಿದ್ದ ಕಾರಣ ಕಣಕಿಯನ್ನು ಶೆಡ್‍ನಲ್ಲಿ ತಂದಿಡುವ ಸಂದರ್ಭದಲ್ಲಿ ಹಾವು ಕಚ್ಚಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.