
(ಸಂಜೆವಾಣಿ ವಾರ್ತೆ)
ಅಣ್ಣಿಗೇರಿ,ಸೆ5: ಸೈದಾಪುರ ಗ್ರಾಮದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಕ್ತಿ ಯೋಜನೆ ಜಾರಿಗೊಂಡು ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿದ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದ ಪ್ರಯಾಣಿಕರು ಇದರಿಂದ ಹೆಚ್ಚಿನ ತೊಂದರೆಗೊಳಗಾಗಿದ್ದು, ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ. ಬಸ್ ಕೊರತೆಯಿಂದ ನಗರ, ತಾಲೂಕು ಪ್ರದೇಶದ ಸುತ್ತಲ ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕೆ ನಗರ, ಪಟ್ಟಣಕ್ಕೆ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ತೆರಳಬೇಕಿದ್ದು ಸರಕಾರಿ ಬಸ್‍ಗಳನ್ನೇ ಅವಲಂಬಿಸಬೇಕಿದೆ. ಮೊದಲೇ ಪ್ರಯಾಣಿಕರಿಂದ ತುಂಬಿ ಬರುವ ಬಸ್‍ಗಳು ನಿಲ್ಲದೇ ಹೋಗುವುದರಿಂದ ಬಹಳಷ್ಟು ದಿನ ಶಾಲೆ ತಪ್ಪಿಸಬೇಕಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಿಂದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಸಂಚರಿಸಲು ಸರಿಯಾದ ಬಸ್ ಸೌಕರ್ಯ ಇಲ್ಲದೇ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲೇ ಸ್ಥಗಿತಗೊಳಿಸುವಂತಾಗಿದೆ. ಗ್ರಾಮಕ್ಕೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬೇಡಿಕೆಗೆ ಸಾರಿಗೆ ಇಲಾಖೆ ಸ್ಪಂದನೆ ಮಾಡದಿದ್ದರೆ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಮುಖಂಡರಾದ ವಿ ಡಿ ಅಂದಾನಿಗೌಡ, ಯಲ್ಲಪ್ಪ ದುಂದೂರ್, ಬಸವರಾಜ್ ಜಾಲಿಹಾಳ್, ಖಾಜೆಸಾಬ್ ದೊಡ್ಡಮನೆ,ಬಸವರಾಜ ಗುಮ್ಮಗೊಳ ಮುತ್ತಪ್ಪ ಹಂಚಿನಾಳ, ಹುಸೇನಸಾಬ ಮೇಜಿ ,ಹುಸೇನಸಾಬ ಖುದಾವಂದ ನಾಗರಾಜ ಗೌಡ ಪಾಟೀಲ ಉಪಸ್ಥಿತರಿದ್ದರು.