ಬಸ್ ಸಮಯ ಬದಲಾವಣೆಗೆ ಒತ್ತಾಯ

ಕೋಲಾರ,ಅ.೨೭- ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮ ಹನಮಂತಪುರ ಮಾರ್ಗದಲ್ಲಿ ಸಾರಿಗೆ ಸಂಚಾರ ಸಮಯ ಬದಲಾವಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಮರಸೇನೆ ವತಿಯಿಂದ ಕೆ.ಎಸ್.ಆರ್.ಟಿ.ಸಿ ಕೋಲಾರ ವಿಭಾಗೀಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ ೧೮ ವರ್ಷಗಳಿಂದ ಬೈಯಪ್ಪನಹಳ್ಳಿ ಗ್ರಾಮ ಹನಮಂತಪುರ ಮಾರ್ಗದಲ್ಲಿ ಸಾರಿಗೆ ಸಂಚಾರ ಬೆಳಗ್ಗೆ ೮-೩೦ ಗಂಟೆಗೆ ಬರುತ್ತಿದ್ದು, ಲಾಕ್‌ಡೌನ್ ಸಮಯದಲ್ಲಿ ಬೆಳಗ್ಗೆ ೭ ಗಂಟೆಗೆ ಸಮಯ ಬದಲಾವಣೆ ಮಾಡಲಾಗಿತ್ತು. ಆದರೆ ಈ ಸಮಯದಲ್ಲಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಹಾಗೂ ಸಾರ್ವಜನಿಕರು ಬಸ್‌ಗೆ ಹೋಗಲು ಆಗುವುದಿಲ್ಲ ಇದರಿಂದ ತುಂಬಾ ತೊಂದರೆಯಾಗಿದೆ. ಈ ಸಮಯಕ್ಕೆ ಬರುವ ಬಸ್ಸು ನಮಗೆ ಅನಾನುಕೂಲವಾಗಿದೆ.
ಆದ್ದರಿಂದ ನಮಗೆ ೧೮ ವರ್ಷಗಳಿಂದ ಇದ್ದ ಹಾಗೆ ಬೆಳಗ್ಗೆ ೮-೩೦ಕ್ಕೆ ಬಸ್ ಬಂದರೆ ಎಲ್ಲಾ ಸಾರ್ವಜನಿಕರಿಗೆ, ಕೂಲಿಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನಕೂಲವಾಗಲಿದೆ. ಸಮಸ್ಯೆಯನ್ನು ಬಗೆಹರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಮರಸೇನೆ ರಾಜ್ಯಾಧ್ಯಕ್ಷ ಕರವೇ ಸೋಮಶೇಖರ್, ಕೋಲಾರ ಜಿಲ್ಲಾ ಸಂಘಟನಾ ಅಧ್ಯಕ್ಷ ಪ್ರಸನ್ನ ಬಿ.ಎಂ, ಕನ್ನಡ ಜಾಗೃತ ವೇದಿಜೆ ಜಿಲ್ಲಾಧ್ಯಕ್ಷ ರಮೇಶ್ ಇದ್ದರು.