ಬಸ್ ಸಂಚಾರ ಹೆಚ್ಚಳ ತೀವ್ರಗೊಂಡ ಮುಷ್ಕರ


ಬೆಂಗಳೂರು,ಏ.೧೯-ಆರನೇ ವೇತನ ಆಯೋಗದ ಅನ್ವಯ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮುಷ್ಕರ ೧೨ನೇ ದಿನಕ್ಕೆ ಕಾಲಿಟ್ಟಿದ್ದು ಬಹುತೇಕ ಸಾರಿಗೆ ನೌಕರರು ಕರ್ತವ್ಯದತ್ತ ಮುಖ ಮಾಡಿದ್ದರೆ,ಮತ್ತು ಕೆಲವು ನೌಕರರು ಪ್ರತಿಭಟನೆಯನ್ನು ತೀವ್ರ ಗೊಳಿಸಿದ್ದಾರೆ.
ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸೇರಿದ ಸಾರಿಗೆ ನಿಗಮ ನೌಕರರು ಪ್ರತಿಭಟನೆ ನಡೆಸಿ ಆರನೇ ವೇತನ ಆಯೋಗದ ಅನ್ವಯ ವೇತನ ಜಾರಿಗೊಳಿಸುವಂತೆ ಆಗ್ರಹಿಸಿದ್ದು ಪೊಲೀಸರು ಪ್ರತಿಭಟನೆ ನಡೆಸಿದ ನೌಕರರನ್ನು ಬಂಧಿಸಿದ್ದಾರೆ.
ಮುಷ್ಕರವನ್ನು ತೀವ್ರಗೊಳಿಸಿರುವ ಸಾರಿಗೆ ನೌಕರರ ಕೂಟದ ಸದಸ್ಯರು ಅಧಿಕ ಬಸ್‌ಗಳು ಸಂಚರಿಸುವ ಡಿಪೋಗಳ ವ್ಯಾಪ್ತಿಯಲ್ಲೇ ಸತ್ಯಾಗ್ರಹ ನಡೆಸಿದ್ದಾರೆ.
ಸರ್ಕಾರ ನಮ್ಮ ಮುಷ್ಕರವನ್ನು ತಿರಸ್ಕಾರದಿಂದ ನೋಡುತ್ತಿದೆ. ಬೇಡಿಕೆಗಳು ಈಡೇರುವವರೆಗೂ ಮುಷ್ಕರವನ್ನು ಕೈಬಿಡುವುದಿಲ್ಲ. ಮುಷ್ಕರವನ್ನು ನಾಳೆಯಿಂದ ತೀವ್ರಗೊಳಿಸುತ್ತೇವೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬದಲಾಗಿ ಮುಷ್ಕರ ನಿರತರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ನೋಟಿಸ್ ನೀಡಿ ಕೆಲಸಕ್ಕೆ ಹಾಜರಾಗದ ನೂರಾರು ನೌಕರರನ್ನು ವಜಾಗೊಳಿಸಿದೆ. ಹಲವರನ್ನು ಅಮಾನತ್ತು ಮಾಡಿದೆ. ಮತ್ತೆ ಕೆಲವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿದರು.
ಈ ನಡುವೆ ನಿನ್ನೆ ರಾತ್ರಿ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ಕೆಲವು ನೌಕರರು ಪ್ರತಿಭಟನೆ ತೀವ್ರಗೊಳಿಸಲು ಮನವೊಲಿಸುವ ಕಾರ್ಯ ನಡೆಸಿದ್ದಾರೆ.
ಅನ್ ಲೈನ್ ಅಭಿಯಾನ:
ಒಂದೆಡೆ ಬೆಂಗಳೂರಿನ ಕೇಂದ್ರ ಕಚೇರಿ ಮತ್ತು ವಿವಿಧ ಡಿಪೋಗಳಲ್ಲಿ ಅಧಿಕಾರಿಗಳು ಬೆಳಗಿನ ಜಾವ ೪ರ ವರೆಗೂ ಕಾರ್ಯ ನಿರ್ವಹಿಸಿದರೆ ಮತ್ತೂಂದೆಡೆ ನೌಕರರು ರಾತ್ರಿಯಾಗುತ್ತಿದ್ದಂತೆಯೇ ಸಹೋದ್ಯೋಗಿಗಳ ಮನವೊಲಿಕೆಗೆ ಇಳಿಯುತ್ತಿರುವುದು ಕಂಡುಬಂದಿದೆ
ಅಧಿಕಾರಿಗಳು ನಿತ್ಯ ಸಂಜೆ ಹೊರಡಿಸುವ ಅಮಾನತು, ವಜಾ, ವರ್ಗಾವಣೆ ಪಟ್ಟಿಗಾಗಿ ರಾತ್ರಿಯಿಡೀ ಕೆಲಸ ಮಾಡುತ್ತಿದ್ದಾರೆ.
ಇದಕ್ಕೆ ಪ್ರತಿಯಾಗಿ ರಾತ್ರಿಯೇ ನೌಕರರ ಕೂಟ ಮುಷ್ಕರ ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿವೆ. ರಾತ್ರಿಯಾಗುತ್ತಿದ್ದಂತೆ ಆನ್‌ಲೈನ್ ಮೂಲಕ ನೌಕರರನ್ನು ಹಿಡಿದಿಡುವ ಪ್ರಯತ್ನ ನಡೆಸುತ್ತಿವೆ.
ಶೇ೪೦ರಷ್ಟು ಬಸ್ ಸಂಚಾರ:
ದಿನದಿಂದ ದಿನಕ್ಕೆ ಬಸ್ ಸಂಚಾರ ಹೆಚ್ಚುತ್ತಿರುವ ಬೆನ್ನಲ್ಲೇ ಶೇ೪೦ರಷ್ಟು ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಆರಂಭಿಸಿವೆಯಾದರೂ ಪ್ರಯಾಣಿಕರ ಪರದಾಟ ಮಾತ್ರ ತಗ್ಗಿಲ್ಲ. ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ೧೨ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ನಡುವೆ ಪ್ರಯಾಣಿಕರನ್ನು ಸೆಳೆಯಲು ಪೈಪೋಟಿ ನಡೆದಿದ್ದು, ಚಾಲಕರು, ನಿರ್ವಾಹಕರ ನಡುವೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಮಾತಿನ ಚಕಮಕಿ ನಡೆದಿದೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮುಷ್ಕರ ಮುಂದುವರೆಸಿರುವುದರಿಂದ ಸಾರಿಗೆ ನೌಕರರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಮುಷ್ಕರ ನಡೆಸುವುದು ಎಷ್ಟು ಸಮಂಜಸ ಎಂದು ಹಲವು ಸಾರ್ವಜನಿಕರು ಪ್ರಶ್ನಿಸಿದ್ದಾರೆ.