
ಬೆಂಗಳೂರು, ಏ.7- ಸಾರಿಗೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ನಡೆಸುತ್ತಿರುವ ಮುಷ್ಕರದಿಂದಾಗಿ ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ಇಂದು ಒಂದೇ ದಿನ ಸುಮಾರು 14 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಬಿಎಂಟಿಸಿ ಪ್ರಸ್ತುತ ದಿನದ ಆದಾಯ ಸುಮಾರು 2.5ರಿಂದ 3 ಕೋಟಿಯಷ್ಟು ಇದೆ. ಕೆಎಸ್ಆರ್ಟಿಸಿಯ ನಿತ್ಯದ ಆದಾಯ 7 ಕೋಟಿ, ವಾಯವ್ಯ ಸಾರಿಗೆಯದ್ದು 2 ಕೋಟಿ, ಈಶಾನ್ಯ ಸಾರಿಗೆ 2 ಕೋಟಿ ಆದಾಯವಿದೆ.
ಸಾರಿಗೆ ನೌಕರರ ಮುಷ್ಕರದಿಂದ ಕೋಟಿ ಕೋಟಿ ನಷ್ಟವಾಗುತ್ತಿದೆ. ಈಗಾಗಲೇ ಕೋವಿಡ್ನಿಂದಲೇ ಸಾಕಷ್ಟು ನಷ್ಟ ಅನುಭವಿಸಿದ್ದ ನಿಗಮಗಳಿಗೆ, ಬಸ್ ಕಾರ್ಯಾಚರಣೆ ಇಲ್ಲದೇ ಇರುವುದು ಇನ್ನಷ್ಟು ಆಘಾತ ಉಂಟು ಮಾಡಿದೆ. ಈ ಹಿಂದೆ ಡಿಸೆಂಬರ್ 11ರಿಂದ 14ರವರೆಗೆ ದಿಢೀರ್ ಬಸ್ ಸ್ಥಗಿತಗೊಳಿಸಲಾಗಿತ್ತು. ಇದರಿಂದ ನಿಗಮಕ್ಕೆ 2,250 ಕೋಟಿ ರೂಪಾಯಿ ನಷ್ಟ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗಿತ್ತು.
ಸಾರಿಗೆ ಸಿಬ್ಬಂದಿ ವಿವರ
ಕೆಎಸ್ಆರ್ಟಿಸಿಯಲ್ಲಿ 37 ಸಾವಿರ, ಬಿಎಂಟಿಸಿಯಲ್ಲಿ 36 ಸಾವಿರ , ಎನ್ಡಬ್ಲ್ಯೂಕೆಆರ್ಟಿಸಿಯಲ್ಲಿ 25 ಸಾವಿರ , ಎನ್ಇಕೆಆರ್ಟಿಸಿಯಲ್ಲಿ 22 ಸಾವಿರ ಸಿಬ್ಬಂದಿಯಿದ್ದು ನಾಲ್ಕು ನಿಗಮಗಳಿಂದ ಒಟ್ಟು ಸಾರಿಗೆ ಸಿಬ್ಬಂದಿ ಸಂಖ್ಯೆ 1 ಲಕ್ಷದ 20 ಸಾವಿರ ಮಂದಿ ಇದ್ದಾರೆ.
ನಾಲ್ಕೂ ನಿಗಮಗಳಿಗೆ ತಿಂಗಳ ಸಂಬಳಕ್ಕೆ ಬೇಕಾಗುವ ಹಣ 320 ಕೋಟಿ ರೂಪಾಯಿ ಇದ್ದು, ಭತ್ಯೆ ಸೇರಿ ಪ್ರತಿ ತಿಂಗಳು ಸುಮಾರು 320 ಕೋಟಿ ರೂಪಾಯಿಗಳಷ್ಟು ಬೇಕಾಗುತ್ತದೆ. ಇದೀಗ ನೌಕರರ ಮುಷ್ಕರದಿಂದ ಮತ್ತೆ ನಷ್ಟದ ಸುಳಿಯಲ್ಲಿ ನಿಗಮಗಳು ಸಿಲುಕಿವೆ.