ಕೋಲಾರ,ಜೂ,೨:ಕೋಲಾರ ನಗರದಿಂದ ಕೋಟಿಗಾನಹಳ್ಳಿ ಮಾರ್ಗವಾಗಿ ಚಲಗಾನಹಳ್ಳಿ, ಹರಟಿ ಮತ್ತು ಬಂಗಾರಪೇಟೆಯಿಂದ ಹರಟಿ ಮಾರ್ಗವಾಗಿ ಕೋಟಿಗಾನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ ಬಸ್ ಸಂಚಾರವನ್ನು ಯಥಾಪ್ರಕಾರ ಮುಂದುವರೆಸುವಂತೆ ಕೋಟಿಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಗಾಗಲೇ ತಾಲೂಕಿನ ಕೋಟಿಗಾನಹಳ್ಳಿ ಗ್ರಾಮಕ್ಕೆ ಕೋಲಾರದಿಂದ ಬೇತಮಂಗಲ ರಸ್ತೆಯಲ್ಲಿ ಬಂದು ಹರಟಿ ಮಾರ್ಗವಾಗಿ ಚಲಗಾನಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ಸು ಕೋಟಿಗಾನಹಳ್ಳಿ ಮೇಲೆಯೇ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮೂರು ಸಮಯದಲ್ಲಿ ಬರುತ್ತಿದ್ದವು. ಕೊರೋನಾ ಸಂದರ್ಭದಲ್ಲಿ ಕೆಲವು ಬಸ್ಸುಗಳನ್ನು ನಿಲ್ಲಿಸಲಾಗಿ ಮತ್ತು ಕೆಲವೊಂದು ಬಸ್ಸುಗಳು ಬದಲಿ ಮಾರ್ಗವಾಗಿ ಸಂಚರಿಸುತ್ತಿವೆ. ಬಂಗಾರಪೇಟೆಯಿಂದಲೂ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ.
ಎರಡೂ ಮಾರ್ಗವಾಗಿ ಬಸ್ ಸಂಚಾರವನ್ನು ನಿಲ್ಲಿಸಿರುವುದರಿಂದ ಕೋಟಿಗಾನಹಳ್ಳಿ ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ದಿನನಿತ್ಯ ಕಾಲೇಜು ವಿದ್ಯಾರ್ಥಿಗಳೂ, ಹಿರಿಯ ನಾಗರೀಕರೂ, ಮಹಿಳೆಯರೂ, ಅಂಗವಿಕಲರೂ ಒಟ್ಟಾರೆಯಾಗಿ ಸಾರ್ವಜನಿಕರು ಸಂಚರಿಸಲು ಬಹಳ ತೊಂದರೆಯಾಗಿದ್ದು, ತುಂಬಾ ಕಷ್ಟ ಪಡುವಂತಾಗಿದೆ.
ಕೂಡಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ನಿಯೋಗದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಹರಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಗೋಪಾಲ್, ಕೆ.ಸಿ.ಗೋಪಾಲಗೌಡ., ವಿ.ಗೋವಿಂದಗೌಡ ಮತ್ತು ಕೋಟಿಗಾನಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.