ಬಸ್ ಸಂಚಾರ ಆರಂಭ ಜನ ನಿರಾಳ


ಬೆಂಗಳೂರು,ಏ.೨೨- ಕಳೆದ ೧೫ ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ಅಂತ್ಯಗೊಂಡ ಬೆನ್ನಲ್ಲೇ ರಾಜ್ಯದಾದ್ಯಂತ ಬಸ್ ಸಂಚಾರ ಆರಂಭಗೊಂಡಿದೆ.
ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ತುಮಕೂರು ಸೇರಿದಂತೆ ರಾಜ್ಯದಲ್ಲೆಡೆ ಬಸ್ ಸಂಚಾರ ಮಾಮೂಲು ಸ್ಥಿತಿಗೆ ಬಂದಿದ್ದು ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಮುಷ್ಕರ ವಾಪಸ್ ಪಡೆದಿರುವುದರಿಂದ ರಾಜ್ಯದಲ್ಲಿ ಎಂದಿನಂತೆ ಬಸ್ ಸಂಚಾರ ಮತ್ತೆ ಆರಂಭವಾಗಿದೆ.
ಮುಂಜಾನೆಯಿಂದ ಮೆಜೆಸ್ಟಿಕ್‌ನ ಬಿಎಂಟಿಸಿ, ಹಾಗೂ ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ೧೫ ದಿನಗಳಿಂದ ಬಸ್ಸಿಲ್ಲದೇ ಪರದಾಡ್ತಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣಗಳು ಇಂದು ಮತ್ತೆ ಸಹಜ ಸ್ಥಿತಿಗೆ ಮರಳಿವೆ. ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಎಲ್ಲಾ ಡಿಪೋಗಳಿಂದ ಬಿಎಂಟಿಸಿ ಬಸ್‌ಗಳು ಆಪರೇಟ್ ಆಗಿವೆ.
ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡಬೇಕು ಎಂಬ ಬೇಡಿಕೆಯೂ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯದ ಸಾರಿಗೆ ನಿಗಮಗಳ ನೌಕರರು ಏಪ್ರಿಲ್ ೭ ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆದರೆ ಸರಕಾರ ಬೇಡಿಕೆಗೆ ಮಣಿದಿರಲಿಲ್ಲ. ಇತ್ತ ಪಟ್ಟು ಬಿಡದ ಸಾರಿಗೆ ನೌಕರರು ಮುಷ್ಕರವನ್ನೂ ಕೈಬಿಡದೆ ಸತತ ೧೫ ದಿನಗಳಿಂದ ಪ್ರತಿಭಟನೆ ನಡೆಸಿಕೊಂಡು ಬಂದಿದ್ದರು.
ಮುಷ್ಕರದ ಮಧ್ಯ ಪ್ರವೇಶಿದ ಹೈಕೋರ್ಟ್ ಮುಷ್ಕರ ಕೈಬಿಟ್ಟು ಬಸ್ ಸಂಚಾರ ಆರಂಭಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ನ್ಯಾಯಮೂರ್ತಿಗಳ ಹೇಳಿಕೆಗೆ ಗೌರವ ಕೊಡುತ್ತೇವೆ. ಕೋವಿಡ್ ಕಾರಣದಿಂದ ಕರ್ತವ್ಯಕ್ಕೆ ಹಾಜರಾಗಿ ಎಂದಿದ್ದಾರೆ. ಜನರಿಗೆ ತೊಂದರೆ ಕೊಡಬೇಡಿ ಎಂದಿದ್ದಾರೆ. ಹೀಗಾಗಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
೨೮೭ ಕೋಟಿ ನಷ್ಟ:
ಸಾರಿಗೆ ನೌಕರರ ಮುಷ್ಕರದಿಂದ ಸಾರಿಗೆ ಸಂಸ್ಥೆಗೆ ಭಾರೀ ಹೊಡೆತ ಬಿದ್ದಿದ್ದು, ಮುಷ್ಕರದಿಂದ ಸಾರಿಗೆ ನಿಗಮಕ್ಕೆ ಬರೋಬ್ಬರಿ ೨೮೭ ಕೋಟಿ ರೂ. ಆದಾಯ ನಷ್ಟವಾಗಿದೆ.
ಕೆಎಸ್‌ಆರ್‌ಟಿಸಿ ನಿಗಮಕ್ಕೆ ೧೨೨.೫೦ ಕೋಟಿ ರೂ ನಷ್ಟವಾಗಿದ್ದು, ಬಿಎಂಟಿಸಿಗೆ ೪೫ ಕೋಟಿ ಎನ್ ಡಬ್ಲ್ಯೂ ಕೆಆರ್‌ಟಿಸಿಗೆ ೫೭.೫೦ ಕೋಟಿ,ಎನ್ ಇ ಕೆಆರ್‌ಟಿಸಿಗೆ ೬೨ ಕೋಟಿ ರೂ ನಷ್ಟವಾಗಿದೆ.
ತರಬೇತಿ ಹಂತದಲ್ಲಿದ್ದ ೯೯೫ ನೌಕರರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ. ನಾಲ್ಕು ಸಾರಿಗೆ ನಿಗಮಗಳಿಂದ ಒಟ್ಟು ೨,೯೪೧ ನೌಕರರನ್ನು ಅಮಾನತು ಮಾಡಲಾಗಿದೆ. ೭,೬೬೬ ಮಂದಿಗೆ ನೋಟೀಸ್ ಜಾರಿ ಮಾಡಲಾಗಿದೆ.