ಬಸ್ ಸಂಚಾರಕ್ಕೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

ಜಗಳೂರು.ಡಿ.೪; ತಾಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಕೊಟ್ಟೂರು ಮಾರ್ಗದಿಂದ ಬರುವ  ಕೆ.ಎಸ್ಆರ್ ಟಿ.ಸಿ ಬಸ್ ನಿಗದಿತ ಸಮಯದಲ್ಲಿ ಸಂಚರಿಸುವಂತೆ ಒತ್ತಾಯಿಸಿ ಪೋಷಕರು ವಿದ್ಯಾರ್ಥಿಗಳು ರಸ್ತೆತಡೆದು ಪ್ರತಿಭಟನೆ ನಡೆಸಿದರು.ಬೆಳಿಗ್ಗೆ 8ಗಂಟೆಗೆ ಕೊಟ್ಟೂರಿನಿಂದ ಆಗಮಿಸಬೇಕಿದ್ದ ಬಸ್ ಗಳು ವಿಳಂಬವಾಗಿ 9.45ಕ್ಕೆ ಆಗಮಿಸುತ್ತವೆ ಇದರಿಂದ ಶಾಲೆಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗುತ್ತಿಲ್ಲ.ಅಲ್ಲದೆ ಜಗಳೂರಿನಿಂದ ಸಾಯಂಕಾಲ4 ಗಂಟೆಗೆ ಬಿಡುವ ಬಸ್ 3.30 ಕ್ಕೆ ಹೋಗಿರುತ್ತದೆ.ಮಾರ್ಗ‌ಮಧ್ಯೆಗಿನ ಹೊಸಕೆರೆ ,ಲಕ್ಕಂಪುರ,ಗಡಿಮಾಕುಂಟೆ ಗ್ರಾಮಗಳಿಗೆ ತೆರಳುವ ಸಂಚಾರಿಗಳಿಗೆಸಂಜೆ ಬಸ್ ಸಂಪರ್ಕ ಗಳಿಲ್ಲದೆ ಗ್ರಾಮಗಳಿಗೆ ಹಿಂತಿರುಗಲು ಹರಸಾಹಸ ಪಡುವಂತಾಗಿದೆ ಎಂದು ವಿದ್ಯಾರ್ಥಿಗಳಾದ ರಕ್ಷಿತಾ,ಸೌಂದರ್ಯ,ಐಶ್ವರ್ಯ,ಮಲ್ಲಿಕಾರ್ಜುನ್,ರಂಜಿತಾ,ಅಭಿನಯ,ರೇಷ್ಮ,ಶಶಿಕುಮಾರ್ ,ಪುನಿತ್ ಕುಮಾರ್,ಸೇರಿದಂತೆ ಪೋಷಕರು ಅಳಲು ತೋಡಿಕೊಂಡರು.
ಬೆಳಿಗ್ಗೆ ಸಮಯದಲ್ಲಿ ಮೂರು ಬಸ್ ಗಳು ಏಕಕಾಲದಲ್ಲಿ ಆಗಮಿಸಿದರೆ ಜಗಳೂರು ಮಾರ್ಗದಿಂದ  ಸಂಜೆ ವೇಳೆ ಒಂದೂ ಬಸ್ ಇಲ್ಲದೆ  ಶಾಲಾ ಕಾಲೇಜು  ವಿದ್ಯಾರ್ಥಿಗಳು ಪರದಾಡಿ ಪಾದಚಾರಿಗಳಾಗಿ ಮನೆಗಳಿಗೆ ಸೇರುವ ಅನಿವಾರ್ಯತೆ ಎದುರಾಗಿದೆ ದಾವಣಗೆರೆ ಡಿಪೋನ ಕೆಲ ಬಸ್ ಗಳನ್ನು  ಜಗಳೂರರಿನಿಂದ ಕೊಟ್ಟೂರು ಮಾರ್ಗಕ್ಕೆ ಬಿಡಬೇಕು  ಇಲ್ಲವಾದರೆ ಇರುವ ಬಸ್ ಕೂಡಲೆ ಸಮಸ್ಯೆ ಬಗೆಹರಿಸದಿದ್ದರೆ ಉಗ್ರಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ಸ್ಥಳಕ್ಕೆ ಸಮೀಪದ ಉಜ್ಜಿನಿ ಸಂಚಾರಿ ನಿಯಂತ್ರ ಅಂಜಿನಪ್ಪ ಧಾವಿಸಿ ಮನವೊಲಿಸಿದರೂ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಎದುರಾಯಿತು.ನಂತರ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಘಟನೆ ತಿಳಿಗೊಳಿಸಿ ಕೆಎಸ್ ಆರ್ ಟಿಸಿ ಡಿಪೋ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಿಸಿದಾಗ  ಸೋಮವಾರದಿಂದ ನಿಗದಿತ ಸಮಯದಲ್ಲಿ ಸಂಚರಿಸಲು ನಿಯಂತ್ರಕರಿಗೆ ಸೂಚಿಸಲಾಗುವುದು ಎಂದು ತಿಳಿಸಿದಾಗ ಪ್ರತಿಭಟನೆ ಹಿಂಪಡೆದು ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.