ಬಸ್ ವ್ಯವಸ್ಥೆ ಇಲ್ಲದೆ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತ

ಗಬ್ಬೂರು.ಸೆ.೦೩-ದೇವದುರ್ಗ ತಾಲೂಕಿನ ಶಾವಂತಗೇರಾ, ಹಂಚಿನಾಳ, ಬೂದಿನಾಳ, ಇಂಗಳದಾಳ, ಹದ್ದಿನಾಳ ಗ್ರಾಮಗಳಿಗೆ ಬಸ್ ವ್ಯವಸ್ಥೆಯೂ ಇಲ್ಲ, ಶಾಲೆಯೂ ಇಲ್ಲ ಎನ್ನುವ ಕಾರಣಕ್ಕೆ ಬಹುತೇಕ ಹೆಣ್ಣುಮಕ್ಕಳ ಶಿಕ್ಷಣ ಹಿರಿಯ ಮತ್ತು ಪ್ರೌಢಶಾಲಾ (ಏಂಟನೆ ತರಗತಿಗೆ) ಮೊಟಕುಗೊಳ್ಳುತ್ತಿದೆ.
ಅಲ್ಲದೇ ಸುಮಾರು ೨೦-೩೦ ವಯಸ್ಸಿನ ಬಹುತೇಕ ಯುವಕ-ಯುವತಿಯರು ಎಸ್ಸೆಸ್ಸೆಲ್ಸಿ, ಕಾಲೇಜು ಮೆಟ್ಟಿಲು ಹತ್ತಿಲ್ಲ. ಇದು ದೇವದುರ್ಗ ತಾಲೂಕಿನ ಕೇಂದ್ರಕ್ಕೆ ೩೦ಕಿ.ಮೀ ಇರುವ ಶಾವಂತಗೇರಾ, ಹಂಚಿನಾಳ, ಬೂದಿನಾಳ, ಇಂಗಳದಾಳ, ಹದ್ದಿನಾಳ ಗ್ರಾಮಗಳ ಪರಿಸ್ಥಿತಿ.ಹತ್ತುಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿದೆ.ಆದರೆ ಕೆವಲ ಬೆರಳೆಣಿಕೆಯಷ್ಟು ಮಾತ್ರ ಪಿಯುಸಿ, ಕಾಲೇಜಿಗೆ ಹೋಗುತ್ತಿದ್ದಾರೆ.ಉಳಿದವರು ಉನ್ನತ ಶಿಕ್ಷಣದಿಂದ ದೂರ ಉಳಿದ್ದಿದ್ದು, ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಬಸ್ ಸಂಚಾರಕ್ಕೆ ವಿರೋಧ:ಅಲ್ಲದೆ ಬೂದಿನಾಳ ಗ್ರಾಮದಲ್ಲಿ ರಸ್ತೆ ಕಿರಿದಾಗಿದೆ.ಎರಡು, ನಾಲ್ಕು ಚಕ್ರದ ವಾಹನಗಳು ಮುಖಾಮುಖಿಯಾದರೆ ಸಂಚಾರ ಕಷ್ಟಸಾಧ್ಯ,ಈ ಮುನ್ನ ಸದರಿ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಗೆ ಯತ್ನ ನಡೆದಿತ್ತು.ಆದರೆ ರಸ್ತೆಯ ಎರಡೂ ಕಡೆ ಹತ್ತಿ ನಲ್ಲು ಬೆಳೆಯುವ ಕೆಲವರು ಆಕ್ಷೇಪ ಎತ್ತಿದ್ದರು.
ಬೂದಿನಾಳ ಗ್ರಾಮದ ಮುಖ್ಯರಸ್ತೆಗೆ ಶಾಸಕ ಕೆ.ಶಿವನಗೌಡ ನಾಯಕ ಅವರು ಕಾಮಗಾರಿಗೆ ಚಾಲನೆ ನೀಡಿದ್ದರೂ, ಅಧಿಕಾರಿಗಳು, ಗುತ್ತಿಗೆದಾರರು ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಈ ಹಿಂದೆಯೇ ಹೇಳಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.ಇನ್ನಾದರೂ ಜನಪ್ರತಿನಿಧಿಗಳು ಈ ಗ್ರಾಮದ ಕಡೆ ಗಮನ ಹರಿಸಿ ಕೂಡಲೇ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು.